ಜಿಲ್ಲೆ

ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದವನ ಹತ್ಯೆ

ನವೀನ ಬಿ.ಎಂ

ಶಿವಮೊಗ್ಗ: ನಗರದ ಹೊರವಲಯದ ಬೊಮ್ಮನಕಟ್ಟೆ ಕೆರೆ ಏರಿ ಬಳಿ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್ ಅನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಬೊಮ್ಮನಕಟ್ಟೆಯ ಅವಿನಾಶ್(32) ಹತ್ಯೆಯಾದ ರೌಡಿಶೀಟರ್. 10 ವರ್ಷದ ಹಿಂದೆ ಶಿವಮ್ಗೊಗದಲ್ಲಿ ನಡೆದಿದ್ದ ತಮಿಳು ಗಿರಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಆರೋಪ ಸಾಬೀತಾಗಿದ್ದರಿಂದ ಅವಿನಾಶ್‌ಗೆ ಜೀವಾವಧಿ ಶಿಕ್ಷೆಯಾಗಿತ್ತು. ಐದು ವರ್ಷ ಜೈಲಿನಲ್ಲಿದ್ದ ಆತ ಹೈಕೋರ್ಟ್‌ನಿಂದ ಪೆರೋಲ್ ಪಡೆದು ಹೊರಬಂದಿದ್ದ.

ಶನಿವಾರ ರಾತ್ರಿ ಊಟ ಮುಗಿಸಿಕೊಂಡು ಮನೆಯಿಂದ ಹೊರಹೋಗಿದ್ದ ಅವಿನಾಶ್ ಬೆಳಗ್ಗೆಯಾದರೂ ಮನೆಗೆ ಮರಳಿರಲಿಲ್ಲ. ಬೆಳಗ್ಗೆ ದಾರಿಯಲ್ಲಿ ಹೋಗುವವರು ಮೃತದೇಹ ಗಮನಿಸಿ ವಿನೋಬನಗರ ಠಾಣೆ ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲಿಸಿದರು.

ಟೈಲ್ಸ್ ಕೆಲಸಕ್ಕೆ ಹೋಗುತ್ತಿದ್ದ ಅವಿನಾಶ್ ಶನಿವಾರ ರಾತ್ರಿ ಬೊಮ್ಮನಕಟ್ಟೆ ಕೆರೆ ಏರಿ ಬಳಿ ತೆರಳಿದ್ದು, ಅಲ್ಲಿ ಮದ್ಯ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಇದೇ ವೇಳೆ ದುಷ್ಕರ್ಮಿಗಳು ಅವಿನಾಶ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿರುವ ಸಾಧ್ಯತೆ ಇದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಸಂಜೀವ್‌ಕುಮಾರ್, ವಿನೋಬನಗರ ಇನ್‌ಸ್ಪೆಕ್ಟರ್ ಸಂತೋಷ್‌ಕುಮಾರ್ ಭೇಟಿ ನೀಡಿದ್ದರು. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.