ಚನ್ನರಾಯಪಟ್ಟಣ: ತಾಲೂಕಿನ ರೌಡಿಶೀಟರ್ ಮಾಸ್ತಿ ಕೊಲೆ ಪ್ರಕರಣದಲ್ಲಿ ರೌಡಿಶೀಟರ್ ಯಾಚೇನಹಳ್ಳಿ ಚೇತು ಅಲಿಯಾಸ್ ಚೇತನ್ ಮತ್ತೆ ಜೈಲು ಪಾಲಾಗಿದ್ದಾನೆ.
ಪ್ರಕರಣ ಸಂಬಂಧ ಚೇತನ್ ಮತ್ತು ಇತರ 9 ಜನರ ವಿರುದ್ಧ ಪಟ್ಟಣದ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಈ ಹಿಂದೆ ತೀರ್ಪು ನೀಡಿತ್ತು. ಇದಲ್ಲದೆ ಹಿಂದೆ ಹಲವಾರು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಈತ ಮೊದಲೇ ಜೈಲು ಸೇರಿದ್ದ. ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಚೇತು, ತನ್ನ ವಕೀಲರ ಮೂಲಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಜೀವಾವಧಿ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಜಾಮೀನು ನೀಡಿತ್ತು. ಈ ನಡುವೆ ಹೈಕೋರ್ಟ್ ಆದೇಶದ ವಿರುದ್ಧ ಚನ್ನರಾಯಪಟ್ಟಣ ಪೊಲೀಸರು ಹಾಗೂ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಅರ್ಜಿ ಸಲ್ಲಿಸಿತ್ತು.
ಈ ನಡುವೆ ಚೇತನ್ ಜೇಲಿನಲ್ಲಿದ್ದುಕೊಂಡೇ ಮಾಸ್ತಿ ಕೊಲೆಗೆ ಸಂಚು ರೂಪಿಸಿರುವುದು ಸಾಕ್ಷ್ಯಾಧಾರಗಳಿಂದ ರುಜುವಾತಾದ ಹಿನ್ನೆಲೆಯಲ್ಲಿ ಜಾಮೀನನ್ನು ವಜಾ ಮಾಡಿ, ಏಳು ದಿನಗಳೊಳಗೆ ಶರಣಾಗುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಾಸನದ ಜೈಲು ಅಧಿಕಾರಿಗಳ ಮುಂದೆ ಚೇತು ಗುರುವಾರ ಸರೆಂಡರ್ ಆಗಿದ್ದಾನೆ.