ಆನೇಕಲ್: ಸ್ನೇಹಿತರೊಂದಿಗೆ ಮದ್ಯದ ಪಾರ್ಟಿ ಮಾಡುತ್ತಿದ್ದಾಗ ನಟೋರಿಯಸ್ ರೌಡಿಶೀಟರ್ ಒಬ್ಬನನ್ನು ಆತನ ವಿರೋಧಿ ಗ್ಯಾಂಗ್ ದಾಳಿ ಮಾಡಿ, ಬರ್ಬರವಾಗಿಹತ್ಯೆ ಮಾಡಿದೆ.
ಹೆಬ್ಬಗೋಡಿ ಠಾಣೆ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ಭಾನುವಾರ ತಡರಾತ್ರಿ ರೌಡಿಶೀಟರ್ ನೇಪಾಳಿ ಮಂಜ(32)ನನ್ನು ಮಾರಕಾಸ್ತ್ರಗಳಿಂದ ವಿರೋಧಿ ಪಡೆ ಕೊಚ್ಚಿ ಕೊಲೆ ಮಾಡಿದೆ. ಸ್ನೇಹಿತರ ಜತೆ ಮದ್ಯದ ಪಾರ್ಟಿ ಮಾಡುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬಂದ ಹಂತಕರು ಲಾಂಗು, ಮಚ್ಚುಗಳಿಂದ ದಾಳಿ ಮಾಡಿ ಕೊಲೆಗೈದು ಕಾಲ್ಕಿತ್ತಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಹೆಬ್ಬಗೋಡಿ ರೌಡಿಶೀಟರ್ ಜಗ್ಗ ಅಲಿಯಾಸ್ ಜಗದೀಶ್ ಮತ್ತು ಅವರ ಗ್ಯಾಂಗ್ ಕೊಲೆ ಮಾಡಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ, ಸೋಕೋ ಟೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಆರೋಪಿ ಜೈಲು ಸೇರಿ ಬಂದಿದ್ದ: ಹೆಬ್ಬಗೋಡಿ ಠಾಣೆ ಪಕ್ಕದಲ್ಲಿ ನಿರ್ಮಾಣ ಹಂತದ ಮನೆ ಮಾಲೀಕನನ್ನು ಕೊಲೆ ಪ್ರಕರಣದಲ್ಲಿ ಜಗ್ಗ ಜೈಲು ಸೇರಿ ಇತ್ತೀಚೆಗೆ ಬಿಡುಗಡೆ ಆಗಿದ್ದ.
ವಾರ್ನಿಂಗ್ ನೀಡಿದ್ದರು: ಕಳೆದ ತಿಂಗಳು ಹೆಬ್ಬಗೋಡಿ ಠಾಣೆಯಲ್ಲಿ ರೌಡಿ ಪರೇಡ್ ನಡೆಸಲಾಗಿತ್ತು. ಆಗ ರೌಡಿಶೀಟರ್ ನೇಪಾಳಿ ಮಂಜನನ್ನು ಠಾಣೆಗೆ ಕರೆದು ಹೆಬ್ಬಗೋಡಿ ಇನ್‌ಸ್ಪೆಕ್ಟರ್ ವಾರ್ನಿಂಗ್ ನೀಡಿ ಕಳುಹಿಸಿದ್ದರು.
ಗಡಿಪಾರಾಗಿದ್ದ ನೇಪಾಳಿ ಮಂಜ
ಕೊಲೆಯಾದ ನೇಪಾಳಿ ಮಂಜ ರೌಡಿಸಂ ಬಿಟ್ಟು ಇತ್ತೀಚೆಗೆ ಕುಟುಂಬ ಸಮೇತ ಕುಣಿಗಲ್ನಲ್ಲಿ ನೆಲೆಸಿದ್ದ ಎನ್ನಲಾಗಿದೆ. ಎರಡು ಕೊಲೆ ಸೇರಿ ಕೊಲೆ ಯತ್ನ, ರಾಬರಿಯಂತಹ ಹಲವು ಪ್ರಕರಣಗಳಲ್ಲಿ ನೇಪಾಳಿ ಮಂಜ ಪ್ರಮುಖ ಆರೋಪಿಯಾಗಿದ್ದಾನೆ. ಎರಡು ಬಾರಿ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. ಕಳೆದ ಚುನಾವಣೆ ವೇಳೆ ಗಡಿಪಾರು ಕೂಡ ಮಾಡಲಾಗಿತ್ತು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಪಾರ್ಟಿ ಮಾಡ್ಬೇಡಿ ಎಂದಿದ್ದರು!
ನೇಪಾಳಿ ಮಂಜ ಹಾಗೂ ಸ್ನೇಹಿತರು ಕಳೆದ ಎರಡು ಮೂರು ದಿನದಿಂದ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಮನೆ ಅಕ್ಕ ಪಕ್ಕದಲ್ಲಿ ಪಾರ್ಟಿ ಮಾಡುತ್ತಿದ್ದಾಗ ಸ್ಥಳೀಯರು ಇಲ್ಲಿಂದ ಹೋಗಿ ಎಂದು ಕೂಡ ಹೇಳಿದ್ದರು. ಆದರೂ ಮಾತು ಕೇಳದೆ ಪಾರ್ಟಿ ಮಾಡಿದ್ದರು ಎಂದು ತಿಳಿದುಬಂದಿದೆ.
ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆದೊಡ್ಡಬಳ್ಳಾಪುರ : ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಸಾಲದ ಸುಳಿಗೆ ಸಿಲುಕಿದ ಯುವಕ ನಂದಿ ಮೋರಿ ಬಳಿ ಸೋಮವಾರ ಬೆಳಗ್ಗೆ ನೇಣಿಗೆ ಶರಣಾಗಿದ್ದಾನೆ. ಕೊನಘಟ್ಟದ ರಕ್ಷಿತ್ ಬಾಬು (26) ಮೃತ. ಈತ ುಡ್ ಡೆಲಿವರಿ ಕೆಲಸ ಮಾಡುತ್ತಿದ್ದ, ಒಂದೂವರೆ ತಿಂಗಳ ಹಿಂದೆ ಮೃತ ಯುವಕನ ತಾಯಿ ಸಹ ನೇಣಿಗೆ ಶರಣಾಗಿದ್ದರು, ಲಭ್ಯ ಮಾಹಿತಿ ಪ್ರಕಾರ ಸಾಲದ ಸುಳಿಯಲ್ಲಿ ಕುಟುಂಬ ಸಿಲುಕಿತ್ತು. ಸಾಲ ಕೊಟ್ಟವರು ಮನೆಯ ಬಳಿ ಬಂದು ಗಲಾಟೆ ಮಾಡಿದ್ದರೆಂಬ ಕಾರಣಕ್ಕೆ ತಾಯಿ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುಗಾದಿ ದಿನವೇ ನೇಣಿಗೆ ಶರಣಾದ ಪತಿ ದೊಡ್ಡಬಳ್ಳಾಪುರ: ಯುಗಾದಿ ದಿನವೇ ಪತಿ, ಪತ್ನಿ ಜಗಳ ಮಾಡಿಕೊಂಡಿದ್ದು, ಮನನೊಂದ ಪತಿ ನೇಣಿಗೆ ಶರಣಾಗಿದ್ದಾನೆ. ವೀರಾಪುರದ ವಾಸು(40) ಮೃತ. ಗಂಡ, ಹೆಂಡತಿ ನಡುವೆ ಮೂರು ದಿನಗಳ ಹಿಂದೆಯಷ್ಟೇ ಜಗಳವಾಗಿ ಠಾಣೆಗೆ ಹೋಗಿದ್ದು, ಪೊಲೀಸರು ಇಬ್ಬರನ್ನೂ ಕರೆಸಿ ಬುದ್ದಿವಾದ ಹೇಳಿ ಕಳಿಸಿದ್ದರು. ಹಬ್ಬದ ದಿನವು ಜಗವಾಗಿದೆ. ಹೆಂಡತಿಯ ಕಿರಕುಳಕ್ಕೆ ಬೇಸತ್ತ ಪತಿ ನೇಣಿಗೆ ಶರಣಾಗಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.