ರೌಡಿಶೀಟರ್ ರಾಜೇಶ್ ಶೆಟ್ಟಿ ಕೊಲೆಗೆ ಬಳಸಿದ್ದ ಆಯುಧ ಎಸೆದಿದ್ದ ಬೊಮ್ಮನಕಟ್ಟೆಯ ಚಾನೆಲ್ನಲ್ಲಿ ವಿನೋಬನಗರ ಠಾಣೆ ಪೊಲೀಸರು ಸ್ಥಳ ಮಹಜರ್ ನಡೆಸಿದರು. 
ಜಿಲ್ಲೆ

24 ಗಂಟೆಯಲ್ಲಿ ರೌಡಿಶೀಟರ್ ಹತ್ಯೆ ಆರೋಪಿಗಳ ಬಂಧನ

ಶಿವಮೊಗ್ಗ: ಬೊಮ್ಮನಕಟ್ಟೆಯಲ್ಲಿ ರೌಡಿಶೀಟರ್ ರಾಜೇಶೆ ಶೆಟ್ಟಿ ಅಲಿಯಾಸ್ ಕಪ್ಡ ರಾಜೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನೋಬನಗರ ಠಾಣೆ ಪೊಲೀಸರು 24 ಗಂಟೆಯೊಳಗೆ ನಾಲ್ವರನ್ನು ಬಂಧಿಸಿದ್ದು ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.

ಗಣೇಶ್, ಕಿರಣ್ ಗೌಡ, ನಾಗರಾಜ್ ಅಲಿಯಾಸ್ ಚಿಟ್ಟೆನಾಗ ಮತ್ತು ವೆಂಕಟೇಶ್ ಬಂಧಿತರು. ಮೂರುವರೆ ತಿಂಗಳ ಹಿಂದೆ ಬೊಮ್ಮನಕಟ್ಟೆಯಲ್ಲಿ ಬಿಜೆಪಿ ಮುಖಂಡರೊಬ್ಬರ ಅಂತ್ಯಸಂಸ್ಕಾರಕ್ಕೆ ರಾಜೇಶ್ ಶೆಟ್ಟಿ ತೆರಳಿದ್ದಾಗ ಕರಿಯ ವಿನಯ್ ಜತೆ ಜಗಳವಾಗಿತ್ತು. ಅದೇ ದಿನ ರಾತ್ರಿ ರಾಜೇಶ್ ಶೆಟ್ಟಿ ತನ್ನ ಸ್ನೇಹಿತನ ಜತೆ ತೆರಳಿ ಕೈ ಬೆರಳು ತುಂಡಾಗುವಂತೆ ಕರಿಯ ವಿನಯ್ ಮೇಲೆ ಹಲ್ಲೆ ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿನೋಬನಗರ ಠಾಣೆಯಲ್ಲಿ ರಾಜೇಶ್ ಶೆಟ್ಟಿ ಮತ್ತು ಸ್ನೇಹಿತನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಎಫ್‌ಐಆರ್ ದಾಖಲಾದ ಬೆನ್ನಲ್ಲೇ ರಾಜೇಶ್ ಶೆಟ್ಟಿ ಮತ್ತು ಆತನ ಸ್ನೇಹಿತ ಊರು ಬಿಟ್ಟಿದ್ದರು.

ಶನಿವಾರ ಮಧ್ಯಾಹ್ನ ಬೊಮ್ಮನಕಟ್ಟೆ ಮುಖ್ಯರಸ್ತೆಯ ಗ್ಯಾರೇಜ್‌ನಲ್ಲಿ ರಿಪೇರಿಗೆ ಬಿಟ್ಟಿದ್ದ ಬೈಕ್ ತೆಗೆದುಕೊಂಡು ಹೋಗಲು ಬಂದಿದ್ದ ರಾಜೇಶ್ ಶೆಟ್ಟಿ ಮೇಲೆ ಮುಸುಕುಧಾರಿ ಗ್ಯಾಂಗ್ ಮಾರಕಾಸ್ತಗಳಿಂದ ದಾಳಿ ಮಾಡಿ ಹತ್ಯೆ ಮಾಡಿತ್ತು. ಆ ಗ್ಯಾಂಗ್‌ನಲ್ಲಿದ್ದ ನಾಲ್ವರನ್ನು ಬಂಧಿಸಿದ್ದು ಭಾನುವಾರ ವಿನೋಬನಗರ ಠಾಣೆ ಪೊಲೀಸರು, ರಾಜೇಶ್ ಶೆಟ್ಟಿ ಕೊಲೆಗೆ ಬಳಸಿದ್ದ ಆಯುಧ ಎಸೆದಿದ್ದ ಬೊಮ್ಮನಕಟ್ಟೆಯ ಚಾನೆಲ್ನಲ್ಲಿ ಸ್ಥಳ ಮಹಜರ್ ನಡೆಸಿದರು.