ಬೆಂಗಳೂರು: ಪತ್ನಿ ಮೇಲೆ ಕೋಪಗೊಂಡ ರೌಡಿಶೀಟರ್ ಮಗಳಿಗೆ ಮದ್ಯ ಕುಡಿಸಿ ಅದನ್ನು ವಿಡಿಯೋ ಮಾಡಿ ಪತ್ನಿಗೆ ಕಳುಹಿಸಿರುವ ಘಟನೆ ನಡೆದಿದೆ.
ಮಾಗಡಿಯ ಕುಮಾರೇಶ್ ಮಗಳಿಗೆ ಮದ್ಯ ಕುಡಿಸಿದ ರೌಡಿಶೀಟರ್. ಪತಿಯ ಈ ದುಷ್ಕೃತ್ಯದ ಬಗ್ಗೆ ವನಿತಾ ಸಹಾಯವಾಣಿಗೆ ಪತ್ನಿ ದೂರು ನೀಡಿದ ಹಿನ್ನೆಲೆಯಲ್ಲಿ ಆತ ತಲೆ ಮರೆಸಿಕೊಂಡಿದ್ದಾನೆ.
ಕುಮಾರೇಶ್ ರೌಡಿ ಎಂಬುದು ಆಕೆಗೆ ಗೊತ್ತಿರಲಿಲ್ಲ. ಮದುವೆಯಾದ 6 ತಿಂಗಳ ನಂತರ ಆತನ ಕೃತ್ಯಗಳು ಬಯಲಿಗೆ ಬಂದಿದ್ದವು. ಪತಿಯ ಕಿರುಕುಳ ತಾಳಲಾರದೆ ಪತ್ನಿ ಗಂಡನಿಂದ ದೂರವಾಗಿ ಮನೆ ಸೇರಿದ್ದಳು. ಇತ್ತೀಚೆಗೆ ಆತ ಪತ್ನಿ ಮನೆಗೆ ಬಂದು ಮತ್ತೆ ಹಲ್ಲೆ ನಡೆಸಿದ್ದ. ಇದರಿಂದ ಬೇಸತ್ತ ಆಕೆ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದರು. ಪತ್ನಿ ದೂರು ನೀಡಿದ್ದರಿಂದ ಕೋಪಗೊಂಡ ಕುಮಾರೇಶ್ ಪತ್ನಿ ಮನೆಗೆ ತೆರಳಿ ಮಗಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿದ್ದ. ಅಲ್ಲದೆ ಅದನ್ನು ವಿಡಿಯೋ ಮಾಡಿ ತನ್ನ ಪತ್ನಿಗೆ ಕಳುಹಿಸಿದ್ದ. ಕೋಪಗೊಂಡ ಆಕೆ ವನಿತಾ ಸಹಾಯವಾಣಿಗೆ ದೂರು ನೀಡಿದ್ದಳು. ವನಿತಾ ಸಹಾಯವಾಣಿ ಸಿಬ್ಬಂದಿ ಮಗು ಇರುವ ಜಾಗ ಪತ್ತೆ ಮಾಡಿ ರಕ್ಷಿಸಿದ್ದರು. (ದಿಗ್ವಿಜಯ ನ್ಯೂಸ್)