ಜಿಲ್ಲೆ

ರೌಡಿಶೀಟರ್‌ ಕಣುಮನ ಹಂತಕರು ಪೊಲೀಸರಿಗೆ ಶರಣು: ಹೊಳಲ್ಕೆರೆ ಠಾಣೆಯಲ್ಲಿ 10 ಮಂದಿ ಸರೆಂಡರ್‌, 12 ಜನರ ವಿರುದ್ದ ಎಫ್‌ಐಆರ್‌! Rowdy sheeter Kanuma

Rowdy sheeter Kanuma : ದಾವಣಗೆರೆಯ ರೌಡಿಶೀಟರ್ ಸಂತೋಷ ಕುಮಾರ್ ಅಲಿಯಾಸ್ ಕಣುಮನ ಹತ್ಯೆ ಪ್ರಕರಣದಲ್ಲಿ ಭಾಗಿಯಾದ 10 ಜನರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆಗೆ ಸೋಮವಾರ ಸಂಜೆ ಶರಣಾಗಿದ್ದಾರೆ.

ಸಂತೋಷ್, ಕಾರ್ತಿಕ್, ಪ್ರಭು, ನವೀನ್ ಅಲಿಯಾಸ್ ಬ್ರಾಕಿ, ರಾಜ ಅಲಿಯಾಸ್ ತಾರಕ ರಾಜ್, ನವೀನ್ ಅಲಿಯಾಸ್ ಸೈಲೆಂಟ್ ನವೀನ್, ಮಾರುತಿ, ಬಸವರಾಜ್ ಅಲಿಯಾಸ್ ಪಿಂಕಿ, ಜಯಸೂರ್ಯ, ಭರತ್ ಅಲಿಯಾಸ್ ಸ್ಲಂ ಭರತ್ ಶರಣಾದವರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಹಾಗೂ ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಿದ ಬಳಿಕ ದಾವಣಗೆರೆ ಪೊಲೀಸರಿಗೆ ಹಸ್ತಾಂತರಿ ಸಲಾಗುತ್ತದೆ.

ಪ್ರಕರಣದಲ್ಲಿ 12 ಮಂದಿ ಭಾಗಿಯಾಗಿದ್ದಾರೆನ್ನಲಾಗಿದೆ. ಶರಣಾದ ೧೦ ಜನರನ್ನು ಹೊರತು ಪಡಿಸಿ ಇನ್ನಿಬ್ಬರು ಪ್ರಮುಖ ಆರೋಪಿಗಳನ್ನು ದಾವಣಗೆರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ದಾವಣಗೆರೆ ಹದಡಿ ರಸ್ತೆಯ ಕ್ಲಬ್‌ನಲ್ಲಿದ್ದ ಕಣುಮನನ್ನು ಆಟೋದಲ್ಲಿ ಬಂದ ಎಂಟತ್ತು ಜನರ ಗುಂಪು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಸೋಮವಾರ ಹತ್ಯೆಗೈದಿತ್ತು. ಇತ್ತ ದಾವಣಗೆರೆಯ ವಿದ್ಯಾನಗರದಲ್ಲಿ ಕಣುಮ ಆಲಿಯಾಸ್ ಸಂತೋಷ್‌ಕುಮಾರ್ ಹತ್ಯೆಗೆ ಸಂಬಂಧಿಸಿದಂತೆ ಕಣುಮನ ಪತ್ನಿ ಟಿ.ಕೆ.ಶ್ರುತಿ ನೀಡಿದ ದೂರು ಆಧರಿಸಿ 12 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ದಾವಣಗೆರೆಯ ಚಿಗಟೇರಿ ಆಸ್ಪತ್ರೆಯ ಶವಗಾರದಲ್ಲಿ ಮಂಗಳವಾರ ಮರಣೋತ್ತರ ಪರೀಕ್ಷೆ ಬಳಿಕ ಕಣುಮನ ಶವವನ್ನು ಕುಟುಂಬಸ್ಥರಿಗೆ ನೀಡಲಾಯಿತು. ಶವಗಾರದ ಬಳಿ ಕುಟುಂಬಸ್ಥರು, ಸ್ನೇಹಿತರ ದೊಡ್ಡ ದಂಡೇ ನೆರೆದಿತ್ತು. ನಂತರ ಹದಡಿ ಗ್ರಾಮದ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಮಾರಿಕಣಿವೆ ಮೂಲದ ಕಣುಮ, ಬಹಳ ವರ್ಷದಿಂದ ದಾವಣಗೆರೆಯ ನಿಟ್ಟುವಳ್ಳಿಯ ಖಾದಿ ಭಂಡಾರ ಸಮೀಪ ವಾಸಿಸುತ್ತಿದ್ದ. ಈತನ ವಿರುದ್ಧ ಕೆಲವು ಪ್ರಕರಣ ದಾಖಲಾಗಿದ್ದವು.

2019ರ ಮೇ 11ರಂದು ರೌಡಿಶೀಟರ್ ನಾಗರಾಜ ಅಲಿಯಾಸ್ ಬುಳ್ಳನಾಗನ ಕೊಲೆ ಪ್ರಕರಣದ ೧೮ ಆರೋಪಿತರಲ್ಲಿ ಕಣುಮನ ಹೆಸರೂ ಇತ್ತು. ಈ ಪ್ರಕರಣದ ವಿಚಾರವಾಗಿ ಮಾತುಕತೆಯಂತೆ ಶಿಷ್ಯ ಚಾವಳಿ ಸಂತುನ ಬೇಡಿಕೆ ಈಡೇರಿಸಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆದಿತ್ತು. ಆದರೆ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ವಿಚಾರಣೆಯಿಂದಲೇ ತಿಳಿದುಬರಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಾವಣಗೆರೆಯಲ್ಲೇ ಶರಣಾಗುವ ಸಾಧ್ಯತೆ ಇತ್ತು

ಕಣುಮನ ಹತ್ಯೆ ಮಾಡಿದ ಆರೋಪಿಗಳು ಮಂಗಳವಾರ ಬೆಳಗ್ಗೆಯೇ ದಾವಣಗೆರೆ ಪೊಲೀಸರಿಗೆ ಶರಣಾಗುವ ಸಾಧ್ಯತೆ ಕೇಳಿಬಂದಿತ್ತು. ಆದರೆ ಕಾರಣಾಂತರಗಳಿಂದ ೧೦ ಮಂದಿ ಆರೋಪಿಗಳು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಠಾಣೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಬಹುಶಃ ಭದ್ರತೆ ಹಿನ್ನೆಲೆಯಲ್ಲಿ ಹೊಳಲ್ಕೆರೆ ಆಯ್ಕೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

ಮೈ ವರ್ಕ್ ಈಸ್ ಕಂಪ್ಲೀಟ್!

ಹತ್ಯೆ ಸ್ಥಳದಲ್ಲಿ ದುಷ್ಕರ್ಮಿಗಳು ದೊಡ್ಡ ಕೂಗು ಹಾಕಿದ್ದರು. ಇದಾದ ಕೆಲ ಹೊತ್ತಿನಲ್ಲಿ ಆರೋಪಿಗಳಲ್ಲಿ ಒಬ್ಬನಾದ ಚಾವಳಿ ಸಂತು ತನ್ನ ಮೊಬೈಲ್ ಸ್ಟೇಟಸ್‌ನಲ್ಲಿ ‘ಮೈ ವರ್ಕ್ ಈಸ್ ಕಂಪ್ಲೀಟ್’ ಎಂದು ಹಾಕಿಕೊಂಡಿದ್ದ. ಇದರೊಟ್ಟಿಗೆ ಸಲಗ ಚಿತ್ರದ ಸಾಂಕೇತಿಕ ಹಾಡನ್ನೂ ಹಾಕಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ಜಿಪಂ ಸದಸ್ಯ ಕನಸು ನುಚ್ಚುನೂರು

ದಾವಣಗೆರೆ ನಗರಪಾಲಿಕೆ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ನಿರ್ಧರಿಸಿದ್ದ ಕಣುಮಗೆ ಜಿಲ್ಲೆಯ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಆತನ ಬದಲಾಗಿ ಅವಕಾಶ ಗಿಟ್ಟಿಸಿದ್ದ ಅವರ ಅತ್ತೆ ನಾಗರತ್ನಮ್ಮ ೩೬ನೇ ವಾರ್ಡ್‌ನಿಂದ ಸ್ಪರ್ಧಿಸಿ ಜಯಶೀಲರಾಗಿದ್ದರು. ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹದಡಿ ಗ್ರಾಪಂ ಸ್ಥಾನಕ್ಕೆ ಸ್ಪರ್ಧಿಸಲು ಕಣುಮ ಕನಸು ಕಟ್ಟಿದ್ದ. ರಾಜಕಾರಣದ ಪ್ರವೇಶದ ಆತನ ಉಮೇದು ಮಣ್ಣಲ್ಲಿ ಮಣ್ಣಾಯಿತು.

ದುಷ್ಕರ್ಮಿಗಳನ್ನು ಎನ್‌ಕೌಂಟರ್ ಮಾಡಿ

ನನ್ನ ಪತಿ ಇತ್ತೀಚೆಗೆ ಯಾವುದೇ ಗಲಾಟೆಗೆ ಹೋಗದೆ ಅವರ ಪಾಡಿಗೆ ಇರುತ್ತಿದ್ದರು. ಕೃಷಿ ಕೆಲಸ, ರಿಯಲ್ ಎಸ್ಟೇಟ್ ನೋಡಿಕೊಂಡಿದ್ದರು. ಬದಲಾವಣೆ ಆದರೂ ಅವರನ್ನು ಬದುಕಲು ಬಿಡದಿದ್ದರೆ ಹೇಗೆ? ನಮಗಾದ ಅನ್ಯಾಯ ಇತರರಿಗೆ ಆಗಬಾರದು. ಗಂಡನನ್ನು ಕೊಂದ ದುಷ್ಕರ್ಮಿಗಳನ್ನು ಎನ್‌ಕೌಂಟರ್ ಮಾಡಬೇಕು ಎಂದು ಪತ್ನಿ ಟಿ.ಕೆ.ಶ್ರುತಿ ಮಾಧ್ಯಮದವರೆ ದುರು ಬೇಡಿಕೊಂಡರು.

ಎರಡು ದಿನದ ಹಿಂದೆ ಮಾರಿಕಣಿವೆ ಗ್ರಾಮದಲ್ಲಿ ಜಾತ್ರೆ ಇತ್ತು. ತಂದೆ ಒತ್ತಾಸೆಯಂತೆ ಪತ್ನಿ, ಮಕ್ಕಳೊಂದಿಗೆ ಜಾತ್ರೆಗೆ ತೆರಳಿ ಪಾಲಕರ ಮನೆಯಲ್ಲಿ ತಂಗಿದ್ದ ಕಣುಮ, ಕೊಲೆಯಾಗುವ ಮುನ್ನಾ ದಿನ ತಂದೆಯ ತೊಡೆಮೇಲೆ ಮಲಗಿದ್ದ. ಅಪ್ಪ ನಾನು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದ. ಟಿಕೆಟ್ ಸಿಕ್ಕರೆ ಸ್ಪರ್ಧಿಸು, ಎಲ್ಲೇ ಹೋದರೂ ಹುಷಾರಾಗಿರು, ಜನಸೇವೆ ಮಾಡು ಎಂದಿದ್ದರು ಅಪ್ಪ ಕಣುಮಪ್ಪ. ಇದೆಲ್ಲವನ್ನೂ ಶವಗಾರದ ಬಳಿ ನೆನೆದ ಕಣುಮಪ್ಪ, ಇಂದು ನನ್ನ ಮಗ ಮುಖ ಗುರುತು ಸಿಗದ ರೀತಿಯಲ್ಲಿ ಕೊಲೆಯಾಗಿದ್ದಾನೆ ಎಂದು ಗದ್ಗದಿತರಾದರು.