ಜಿಲ್ಲೆ

ಮಾರುತಿ ಅಲಿಯಾಸ್ ಪೊಲ್ಲಾರ್ಡ್ ಫಿನಿಶ್, ಪೊಲೀಸರಿಗೆ ಶರಣಾದ ಆರೋಪಿಗಳು ?

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನು ಶನಿವಾರ ತಡರಾತ್ರಿ ಹತ್ಯೆಗೈಯ್ಯಲಾಗಿದೆ.

ಮಾರುತಿ ಅಲಿಯಾಸ್ ಪೊಲ್ಲಾರ್ಡ್ (34) ಕೊಲೆಯಾದ ರೌಡಿಶೀಟರ್. ನಗರದ ಹೊರವಲಯದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ಪೊಲ್ಲಾರ್ಡ್‌ನನ್ನು ನಾಲ್ಕೈದು ಮಂದಿ ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆಗೈದಿದ್ದಾರೆ.

ಎಣ್ಣೆ ಪಾರ್ಟಿ ವೇಳೆ ಅಟ್ಯಾಕ್!: ಮಧುಗಿರಿ ಮೂಲದ ಮಾರುತಿ ಕ್ಯಾತಸಂದ್ರ ಸಮೀಪದ ಮಂಚಲಕುಪ್ಪೆ ಬಳಿ ತನ್ನ ಪತ್ನಿ ಜೊತೆ ವಾಸವಾಗಿದ್ದ. ತಡರಾತ್ರಿ ಎನ್‌ಎಚ್ 206 ರಸ್ತೆಯ ಬಂಡಿಮನೆ ಕಲ್ಯಾಣ ಮಂಟಪದ ಬಳಿ ತನ್ನ ಸ್ನೇಹಿತರ ಜತೆ ಮದ್ಯ ಸೇವಿಸುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಮಾರುತಿ ಅಲಿಯಾಸ್ ಪೊಲ್ಲಾರ್ಡ್ ಕೊನೆಯುಸಿರೆಳದಿದ್ದಾನೆ.

ಕಳೆದ 7-8 ವರ್ಷಗಳ ಹಿಂದೆ ನಡೆದಿದ್ದ ಹಟ್ಟಿ ಮಂಜ ಕೊಲೆ ಪ್ರಕರಣ ಸೇರಿದಂತೆ ಹಲವು ಅಪಘಾತ ಚಟುವಟಿಕೆಗಳಲ್ಲಿ ರೌಡಿಶೀಟರ್ ಮಾರುತಿ ಭಾಗಿಯಾಗಿದ್ದು ಹಟ್ಟಿ ಮಂಜ ಕೊಲೆ ಪ್ರಕರಣದಲ್ಲಿನ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಾರುತಿ ಮೇಲೆ ಪುಡಿರೌಡಿಗಳು ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಎಸ್‌ಪಿ ಭೇಟಿ: ರೌಡಿಶೀಟರ್ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಎಎಸ್ಪಿ ಮರಿಯಪ್ಪ , ಡಿವೈಎಸ್ಪಿ ಚಂದ್ರಶೇಖರ್ ತಡರಾತ್ರಿಯೇ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ. ಈ ಘಟನೆ ಸಂಬಂಧ ತಿಲಕಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೊಲೆ ಆರೋಪಿಗಳು ಶರಣು !? ರೌಡಿ ಶೀಟರ್ ಮಾರುತಿ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದು ಭಾನುವಾರ ಬೆಳಗಾಗುವುದರ ಹೊತ್ತಿಗೆ ಪ್ರಮುಖ ಆರೋಪಿಗಳಾದ ಶಿವಪ್ರಸಾದ್, ಹೊಟ್ಟೆ ಮಂಜ, ಸಲ್ಮಾನ್, ಶೋಯೆಬ್ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.