ಉಡುಪಿ: ಕೇಂದ್ರ ಸರ್ಕಾರ ಪ್ರವಾಹ, ಅಪಘಾತ, ಭೂಕಂಪ ಮುಂತಾದ ತುರ್ತು ಸಂದರ್ಭದಲ್ಲಿ ಜನರಿಗೆ ನೆರವು ನೀಡುವ ಉದ್ದೇಶದಿಂದ ಆಪದ್ಮಿತ್ರ ಯೋಜನೆ ಜಾರಿಗೊಳಿಸಿದ್ದು, ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ 3 ಸಾವಿರ ಮಕ್ಕಳಿಗೆ 10 ಸಾವಿರ ಮೌಲ್ಯದ ಕಿಟ್ ಜೊತೆಗೆ 7 ದಿನಗಳ ತರಬೇತಿ ನೀಡಲಾಗುವುದು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ಬೋರ್ಡ್ ಹೈಸ್ಕೂಲಿನಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸಂಯುಕ್ತಾಶ್ರಯದಲ್ಲಿ ಉಡುಪಿ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ, ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕ- ಮತ್ತು ಉಪನ್ಯಾಸಕಿಯರಿಗೆ ರೋವರಿಂಗ್ ಮತ್ತು ರೇಂಜರಿಂಗ್ ಪ್ರಾರಂಭಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳನ್ನು ಮಾದಕ ಪದಾರ್ಥಗಳ ಆಕರ್ಷಣೆಯಿಂದ ದೂರವಿಡುವ ನಿಟ್ಟಿನಲ್ಲಿ ಸ್ಕೌಟ್ಸ್ ಚಟುವಟಿಕೆಗಳಲ್ಲಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಸೇರ್ಪಡೆಗೊಳಿಸವ ಚಿಂತನೆ ಇದೆ. ಇದರಿಂದ ಮಕ್ಕಳ ಜ್ಞಾಪನಾ ಸಾಮರ್ಥ್ಯವೂ ವೃದ್ಧಿಸಲಿದೆ ಎಂದು ಹೇಳಿದರು.
ರೋವರ್ಸ್ ಮತ್ತು ರೇಂಜರ್ಸ್ಗಳಿಗೆ ಶಿಸ್ತು ಮತ್ತು ಸಮಯಪ್ರಜ್ಞೆ ಬಹಳ ಮುಖ್ಯ. ಇಲ್ಲದಿದ್ದರೆ ದೇಶದ ಪ್ರಗತಿ ಸಾಧ್ಯವಿಲ್ಲ. ನಾನು ಕಮ್ಯುನಿಷ್ಟ್ ತತ್ವಕ್ಕೆ ವಿರೋಧಿ. ಆದರೆ ಕಮ್ಯುನಿಷ್ಟ್ ರಾಷ್ಟ್ರಗಳಲ್ಲಿ ಜನರು ಶಿಸ್ತು ಮತ್ತು ಸಮಯಪ್ರಜ್ಞೆ ಅಳವಡಿಸಿಕೊಂಡಿದ್ದರಿಂದ ಆರ್ಥಿಕವಾಗಿ ಪ್ರಬಲರಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಮಹಾನ್ ಮುತ್ಸದ್ದಿ ಡಾ. ವಿ.ಎಸ್. ಆಚಾರ್ಯ ಅವರು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಉನ್ನತ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಎಲ್ಲಾ ಕಾಲೇಜುಗಳಲ್ಲಿ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕಡ್ಡಾಯಗೊಳಿಸಿದ್ದರು. ಉಡುಪಿ ಜಿಲ್ಲೆಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸೇವೆ ಕರ್ನಾಟಕಕ್ಕೆ ಮಾದರಿ. ಕರ್ನಾಟಕದ ಜಿಡಿಪಿಗೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಉದ್ಯೋಗ ಸೃಷ್ಟಿಗೆ ಬೇಕಾದ ಅನೇಕ ಉದ್ಯಮಗಳನ್ನು ಹಿರಿಯರು ಇಲ್ಲಿ ಪ್ರಾರಂಭಿಸಿರುವುದು ಗಮನಾರ್ಹವಾಗಿದೆ ಎಂದು ಶ್ಲಾಘಿಸಿದರು.
ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಖಜಾಂಚಿ ಹರಿಪ್ರಸಾದ್ ರೈ, ರಾಜ್ಯ ಸಂಟನಾ ಆಯುಕ್ತ ಎಂ. ಪ್ರಭಾಕರ ಭಟ್, ಡಿಡಿಪಿಯು ಮಾರುತಿ, ಪಪೂ ಪ್ರಾಂಶುಪಾಲರ ಸಂದ ಜಿಲ್ಲಾಧ್ಯಕ್ಷ ವರ್ಗೀಸ್ ಪಿ., ಜಿಲ್ಲಾ ಸ್ಕೌಟ್ಸ್ ಆಯುಕ್ತ ಜನಾರ್ದನ ಕೊಡವೂರು, ಗೈಡ್ಸ್ ಆಯುಕ್ತೆ ಜ್ಯೋತಿ ಪೈ, ಶಿಬಿರ ನಾಯಕ ಗುರುಮೂರ್ತಿ, ಜಿಲ್ಲಾ ಕಾರ್ಯದರ್ಶಿ ಆನಂದ್ ಅಡಿಗ, ಕಾಲೇಜು ಪ್ರಾಂಶುಪಾಲೆ ಲೀಲಾವತಿ ಮೊದಲಾದವರು ಉಪಸ್ಥಿತರಿದ್ದರು.