ಅಕ್ರಮ ಕಟ್ಟಡ ಮುಂದುವರಿಕೆ
ಬೆಂಗಳೂರಿನ ಸಂಚಾರ, ನೀರು, ರ್ಪಾಂಗ್ ಸಮಸ್ಯೆಗೆ ಇಂಬು ನೀಡುತ್ತಿರುವ ಅಕ್ರಮ ಕಟ್ಟಡ ವಿವಾದದ ಕುರಿತು ಹೈಕೋರ್ಟ್ ತುಸು ಹೆಚ್ಚು ಚಾಟಿ ಬೀಸಿತು. ಬೆಂಗಳೂರಿನಲ್ಲಿ ಕೇವಲ 980 ಅಕ್ರಮ ಕಟ್ಟಡಗಳಿವೆ ಎಂಬ ಬಿಬಿಎಂಪಿಯ ಹಾಸ್ಯಾಸ್ಪದ ಪಟ್ಟಿಯನ್ನು ಹೈಕೋರ್ಟ್ ತಿರಸ್ಕರಿಸಿತು. ಹೊಸದಾಗಿ ಸರ್ವೆ ನಡೆಸುವಂತೆ ಬಿಬಿಎಂಪಿಗೆ ನ್ಯಾಯಾಲಯ ಸೂಚಿಸಿತು. ಅಕ್ರಮ ಕಟ್ಟಡಗಳ ಕುರಿತು ಬಿಬಿಎಂಪಿ ಕ್ರಮ ಕೈಗೊಳ್ಳದಿದ್ದರೆ ತಮ್ಮ ಗಮನಕ್ಕೆ ತನ್ನಿ ಎಂದು ಸಂಸದ ರಾಜೀವ್ ಚಂದ್ರಶೇಖರ್ ನೀಡಿದ ಕರೆಗೆ ನೂರಾರು ಮನವಿಗಳು ಸಲ್ಲಿಕೆಯಾದವು.
ರಸ್ತೆ ಗುಂಡಿ ಸದ್ದು
ರಸ್ತೆ ಗುಂಡಿಯ ಕಾರಣಕ್ಕೆ ಅಪಾಯಕ್ಕೆ ಒಳಗಾಗುವ ನಾಗರಿಕರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ತಿಳಿಸಿತು. ನ್ಯಾಯಾಲಯ ಒತ್ತಾಯದ ಮೇರೆಗೆ ಬಿಬಿಎಂಪಿ ಈ ಬಗ್ಗೆ ಜಾಹೀರಾತು ನೀಡಿ, ಅಪಾಯಕ್ಕೆ ಒಳಗಾದ ಸಾರ್ವಜನಿಕರು ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದಿತು. ಆದರೆ ಪರಿಹಾರ ನೀಡುವ ಕುರಿತು ಇನ್ನೂ ನಿರ್ಧಾರ ಆಗಿಲ್ಲ.
ಅಕ್ರಮ-ಸಕ್ರಮ ಗಾಳಿ
ಬೈಲಾ ಉಲ್ಲಂಘಿಸಿ ನಿರ್ವಿುಸಿರುವ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಿ ಒಂದಷ್ಟು ತೆರಿಗೆ ಹೆಚ್ಚಿಸಿಕೊಳ್ಳುವ ರಾಜ್ಯ ಸರ್ಕಾರದ ಈ ಹಿಂದಿನ ನಿರ್ಧಾರ ನ್ಯಾಯಾಲಯದಲ್ಲಿ ಇರುವ ನಡುವೆಯೇ ಮತ್ತೊಮ್ಮೆ ಸರ್ಕಾರ ಈ ಬಗ್ಗೆ ಚರ್ಚೆ ಆರಂಭಿಸಿತು. ಅಕ್ರಮ ಸಕ್ರಮಕ್ಕೆ ಸಮಿತಿ ರಚಿಸಲಾಗುತ್ತದೆ ಎಂದು 2019ರ ಲೋಕಸಭೆ ಚುನಾವಣೆಗೆ ಮುನ್ನ ಬಿಬಿಎಂಪಿ ತಿಳಿಸಿತ್ತು.
ಆದರೆ ಇದೀಗ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಬಿಡಿಎ ಬಡಾವಣೆಗಳಲ್ಲಿನ ಅಕ್ರಮವನ್ನು ಮಾತ್ರ ಸಕ್ರಮಗೊಳಿಸುವುದಾಗಿ ಹೊಸ ಪ್ರಯತ್ನವೊಂದನ್ನು ಆರಂಭಿಸಿತು. ಸುಮಾರು 75 ಸಾವಿರ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಕುರಿತು ನಿಯಮ ರೂಪಿಸಲು ಸಂಪುಟ ಉಪಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತು.
ತಲ್ಲಣ ಉಂಟುಮಾಡಿದ ಅಶುದ್ಧ ನೀರು
ರಾಜ್ಯದ ಆರನೇ ಒಂದು ಭಾಗ ಜನಸಂಖ್ಯೆ ವಾಸಿಸುವ ಬೆಂಗಳೂರಿಗೆ ಜಲಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಸರಬರಾಜು ಮಾಡುವ ಕುಡಿಯುವ ನೀರು ಕಳಪೆ ಗುಣಮಟ್ಟದ್ದು ಎಂದು ಭಾರತೀಯ ಗುಣಮಟ್ಟ ಮಾನಕ ಸಂಸ್ಥೆ (ಬಿಐಎಸ್) ವರ್ಷಾಂತ್ಯದಲ್ಲಿ ನೀಡಿದ ವರದಿ ಚರ್ಚೆಗೆ ಕಾರಣವಾಯಿತು.
ಬೆಂಗಳೂರಿನ ಮತ್ತಿಕೆರೆ, ಮಾಗಡಿ ರಸ್ತೆ, ರಾಜಾಜಿನಗರ, ಜಾಲಹಳ್ಳಿ ಪಶ್ಚಿಮ, ಚಿಕ್ಕಪೇಟೆ, ಬನಶಂಕರಿ, ಜಯನಗರ, ಕಮಲಾನಗರ, ವಿದ್ಯಾರಣ್ಯಪುರ ಹಾಗೂ ದೇವನಹಳ್ಳಿಯ ವಿಜಯಪುರದಿಂದ, ನಲ್ಲಿ ಮೂಲಕ ಹರಿದು ಗ್ರಾಹಕರು ನೀರು ಪಡೆಯುವ ಅಂತಿಮ ಹಂತದಲ್ಲಿ ಸಂಗ್ರಹಿಸಿದ ಮಾದರಿಗಳು ಒಂದಲ್ಲ ಒಂದು ಪರೀಕ್ಷೆಯಲ್ಲಿ ಫೇಲ್ ಆಗಿದ್ದವು. ಆದರೆ ತಾನು ಪ್ರತಿನಿತ್ಯ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡುತ್ತಿದ್ದು, ಉತ್ತಮವಾಗಿದೆ ಎಂದು ಜಲಮಂಡಳಿ ಸ್ಪಷ್ಟನೆ ನೀಡಿತು. ಸಂಪೂರ್ಣ ವರದಿಯನ್ನು ನೀಡುವಂತೆ ಬಿಐಎಸ್ಗೆ ಜಲಮಂಡಳಿ ಪತ್ರ ಬರೆಯಿತು.
ಅಧಿಕಾರಿಗೆ ಛೀಮಾರಿ
ಬೆಳ್ಳಂದೂರು, ಅಗರ ಮತ್ತು ವರ್ತರು ಕೆರೆಮಾಲಿನ್ಯ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಧೋರಣೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಛೀಮಾರಿ. ಕೆರೆ ಕಲುಷಿತಗೊಳ್ಳದಂತೆ ಎಸ್ಟಿಪಿಗಳ ನಿರ್ವಣಗೊಳಿಸಿ,ಕೆರೆ ನೀರು ಮಲಿನವಾಗದಂತೆ ಕ್ರಮ ವಹಿಸುವಂತೆ ಸೂಚನೆ ನೀಡಿತು. ಲೋಕಾಯುಕ್ತದಲ್ಲಿ ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿದ ದೂರಿನ ಮೇರೆಗೆ ಕೆರೆಗಳ ಒತ್ತುವರಿ ತೆರವು, ಕಲುಷಿತ ನೀರು ಬಿಡುಗಡೆಯಂತಹ ಸಮಸ್ಯೆ ಕುರಿತು ವಿಚಾರಣೆ ನಡೆಯುತ್ತಿದೆ.
ತಗ್ಗಿದ ಜಾಹೀರಾತು ಫಲಕಗಳ ಆರ್ಭಟ
ನಗರದ ಅಂದಕ್ಕೆ ಧಕ್ಕೆ ತರುವಷ್ಟು ಜಾಹೀರಾತು ಫಲಕಗಳು ತಲೆ ಎತ್ತಿದ್ದವು. ಹೈಕೋರ್ಟ್ ಬಿಬಿಎಂಪಿಗೆ ತರಾಟೆ ತೆಗೆದುಕೊಂಡು ಎಲ್ಲ ಜಾಹೀರಾತು ಫಲಕ ತೆರವಿಗೆ ಸೂಚನೆ ನೀಡಿತು. ಹೀಗಾಗಿ ನಗರದ ಬ್ಯಾನರ್, ಬಂಟಿಂಗ್ಸ್, ಕಟೌಟ್, ಪೋಸ್ಟರ್ ಮತ್ತು ಗೋಡೆಬರಹಗಳನ್ನು ತೆರವುಗೊಳಿಸಿದೆ.
ಕೆರೆಗಳು ಒಡೆದು ಅವಾಂತರ
ಜಲಮಂಡಳಿ
ಮೇಯರ್- ಉಪಮೇಯರ್ ಆಯ್ಕೆ
ಅಲ್ಲಿಯೂ ಅಚ್ಚರಿಯ ಬೆಳವಣಿಗೆಯಲ್ಲಿ ಎಂ. ಗೌತಮ್ ಕುಮಾರ್ ಹಾಗೂ ರಾಮಮೋಹನ ರಾಜು ಅವರು ಮೇಯರ್ ಹಾಗೂ ಉಪಮೇಯರ್ ಆದರು. ಕನ್ನಡದ ಬೆಂಗಳೂರಿಗೆ ಉತ್ತರ ಭಾರತ ಮೂಲದವರನ್ನು ಬಿಜೆಪಿ ಮೇಯರ್ ಮಾಡಿದೆ ಎಂಬ ಸಾಮಾಜಿಕ ಜಾಲತಾಣ ಅಭಿಯಾನ ಪ್ರಬಲವಾಗಲಿಲ್ಲ. ಬೆಂಗಳೂರಿನ ಕುಡಿಯುವ ನೀರಿನ ದಾಹ ತಣಿಸುವ ಕಾವೇರಿಗೆ ಪೂಜೆ ಸಮರ್ಪಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ಮೇಯರ್ ಗೌತಮ್ ಕುಮಾರ್ ನಾಂದಿ ಹಾಡಿದರು.
| ಮಾಹಿತಿ: ರಮೇಶ ದೊಡ್ಡಪುರ, ದ್ವಾರಕಾನಾಥ್ ಎಲ್.