ಪಿರಿಯಾಪಟ್ಟಣ: ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಸೇವೆ ಮಾಡುವುದು ರೋಟರಿಯ ಧ್ಯೇಯವಾಗಿದೆ ಎಂದು ರೋಟರಿ ಜಿಲ್ಲಾ ಮಾಜಿ ಪ್ರಾಂತಪಾಲ ಡಾ.ರವಿ ಅಪ್ಪಾಜಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ರೋಟರಿ ಸಂಸ್ಥೆಯು ವಿಶ್ವಾದ್ಯಂತ ಪಸರಿಸಿದ್ದು ಶಿಕ್ಷಣ, ಆರೋಗ್ಯ, ಮೂಲ ಸೌಲಭ್ಯಗಳು, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ತನ್ನದೆ ಆದ ಕೊಡುಗೆಗಳನ್ನು ನೀಡುತ್ತಾ ಬರುತ್ತಿದೆ ಎಂದರು.
ವಿಶ್ವಾದ್ಯಂತ ಪೋಲಿಯೋ ರೋಗವನ್ನು ತಡೆಗಟ್ಟಲು ಪಣತೊಟ್ಟ ರೋಟರಿ ಸಂಸ್ಥೆಯು ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಬಹುತೇಕ ರಾಷ್ಟ್ರಗಳಲ್ಲಿ ಪೋಲಿಯೋ ಸಂಪೂರ್ಣವಾಗಿ ಅಂತ್ಯ ಕಂಡಿದೆ ಎಂದರು.
ರೋಟರಿಯ ಕಾರ್ಯಕ್ರಮಗಳು ಜನಮಾನಸದಲ್ಲಿ ಚಿರಪರಿಚಿತವಾಗಿದ್ದು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲ ಸೌಲಭ್ಯಗಳ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ರೋಟರಿ ವಲಯ 6ರ ಸಹಾಯಕ ಪ್ರಾಂತಪಾಲ ಆನಂದ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ರೋಟರಿ ಸಂಸ್ಥೆಯು 9 ಅಂಶಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಗುರಿ ಹೊಂದಿದ್ದೇವೆ ಎಂದರು. ವಲಯ ಸೇನಾನಿ ಉದಯ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ಕೆ.ರಮೇಶ್, ನೂತನ ಅಧ್ಯಕ್ಷ ಜೆ.ಎಸ್.ನಾಗರಾಜ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೂವರು ಹೊಸ ಸದಸ್ಯರು ಸಂಸ್ಥೆಗೆ ಸೇರ್ಪಡೆಗೊಂಡರು. ನಿಕಟಪೂರ್ವ ಕಾರ್ಯದರ್ಶಿ ಪಿ.ಎಸ್.ಹರೀಶ್, ನೂತನ ಕಾರ್ಯದರ್ಶಿ ಬಿ.ಎಸ್.ಪ್ರಸನ್ನಕುಮಾರ್, ವಲಯ 6ರ ಮಾಜಿ ಸಹಾಯಕ ಪ್ರಾಂತಪಾಲರಾದ ಡಿ.ಎಂ.ತಿಲಕ್, ಡಾ.ಚಂದ್ರಶೇಖರ್, ನಾಗೇಶ್, ಅರುಣ್.ಬಿ.ನರಗುಂದ, ಸಂಸ್ಥೆಯ ಪದಾಧಿಕಾರಿಗಳಾದ ಎಂ.ಬಿ.ಸಂಪತ್, ಸಿ.ಎನ್.ವಿಜಯ್, ಬಿ.ಆರ್.ಗಣೇಶ್, ಎಸ್.ರಮೇಶ್, ಎನ್.ಕರುಣಾಕರ್, ಟಿ.ಎಸ್.ಹರೀಶ್, ಶಿಲ್ಪಾ, ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.