ಬೆಂಗಳೂರು: ವಿಶ್ವ ಪೋಲಿಯೊ ದಿನದ ಅಂಗವಾಗಿ ರೋಟರಿ ಡಿಸ್ಟಿಕ್ಟ್ 3192 ಸಂಸ್ಥೆಯು ಗುರುವಾರ ಸಂಜೆ ಆಯೋಜಿಸಿದ್ದ ವಾಕಥಾನ್ ವಿಧಾನಸೌಧದ ಆವರಣದಲ್ಲಿನ ಕೆಂಪೇಗೌಡ ಪ್ರತಿಮೆಯಿಂದ ಪ್ರಾರಂಭವಾಗಿ ಲ್ಯಾವೆಲ್ಲೆ ರಸ್ತೆಯ ರೋಟರಿ ಹೌಸ್ ಆ್ ಫ್ರೆಂಡ್‌ಶಿಪ್‌ನಲ್ಲಿ ಕೊನೆಗೊಂಡಿತು. ಪೋಲಿಯೊ ನಿರ್ಮೂಲನೆಯಲ್ಲಿ ರೋಟರಿಯ ದಶಕಗಳ ನಾಯಕತ್ವವನ್ನು ಈ ಕಾರ್ಯಕ್ರಮದ ಮೂಲಕ ಸ್ಮರಿಸಲಾಯಿತು. ಇದೇ ವೇಳೆ ಪೋಲಿಯೊ ಮುಕ್ತ ಜಗತ್ತಿಗೆ ನಾಗರಿಕರು ಒಂದಾಗಲು ಕರೆ ನೀಡಲಾಯಿತು.
ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ, ಜಾಗತಿಕ ಪೋಲಿಯೊ ನಿರ್ಮೂಲನೆ ಅಭಿಯಾನದಲ್ಲಿ ರೋಟರಿ ಇಂಟರ್ ನ್ಯಾಷನಲ್ ಮುಂಚೂಣಿಯಲ್ಲಿದ್ದು, ಫಿಲಿಪೈನ್ಸ್ನಲ್ಲಿ 1979ರಲ್ಲಿ ತನ್ನ ಮೊದಲ ರೋಗನಿರೋಧಕತೆ ಯೋಜನೆಯನ್ನು ರೋಟರಿ ಸಂಸ್ಥೆ ಪ್ರಾರಂಭಿಸಿತು. 1985ರಲ್ಲಿ ಜಾಗತಿಕ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುವ ಮೊದಲ ಮತ್ತು ಅತಿದೊಡ್ಡ ಖಾಸಗಿ ವಲಯದ ಉಪಕ್ರಮವಾದ ಪೋಲಿಯೊಪ್ಲಸ್ ಅನ್ನು ಸಂಸ್ಥೆ ಪರಿಚಯಿಸಿತು.
1988 ರಲ್ಲಿ, ರೋಟರಿ ಜಾಗತಿಕ ಪೋಲಿಯೊ ನಿರ್ಮೂಲನೆ ಉಪಕ್ರಮ (ಜಿಪಿಇಐ) ಸ್ಥಾಪಕ ಪಾಲುದಾರರಾಗಿ, ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್, ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ಸೇರಿ ಹಲವು ಸಂಸ್ಥೆಗಳೊಂದಿಗೆ ರೋಟರಿ ಕೈಜೋಡಿಸಿತು. ನಂತರದಲ್ಲಿ ನಡೆಸಲಾದ ಅಭಿಯಾನಗಳ ಮೂಲಕ ಪೋಲಿಯೊ ಪ್ರಕರಣಗಳು ಶೇ. 99.9 ಕಡಿಮೆಯಾಯಿತು. 2.5 ಶತಕೋಟಿಗೂ ಅಧಿಕ ಮಕ್ಕಳಿಗೆ ಲಸಿಕೆ ನೀಡಲಾಯಿತು. ಇದು ಜಾಗತಿಕ ಆರೋಗ್ಯ ಇತಿಹಾಸದಲ್ಲಿ ಶ್ರೇಷ್ಠ ಸಾಧನೆಯಾಗಿದೆ.
ಪೋಲಿಯೋ ದಿನದ ಅಂಗವಾಗಿ ರೋಟರಿ ಹಮ್ಮಿಕೊಂಡಿದ್ದ ಈ ವಾಕಥಾನ್‌ನಲ್ಲಿ ಪೋಲಿಯೋ ನಿರ್ಮೂಲನೆ ಕಾರ್ಯದಲ್ಲಿ ರೋಟರಿಯ ಕೊಡುಗೆಗಳನ್ನು ಸ್ಮರಿಸಲಾಯಿತು.