ಜಿಲ್ಲೆ

ಸಾಮರಸ್ಯದ ಜತೆಗೆ ಸಂಭ್ರಮವನ್ನು ರೋಟರಿ ಕಲಿಸುತ್ತದೆ

ಆದರ್ಶ್. ಎಂ.ಕೆ.

ಮಡಿಕೇರಿ: ಒಡನಾಟ, ಸಾಮರಸ್ಯದೊಂದಿಗೆ ಜೀವನದಲ್ಲಿ ಸಾಮಾಜಿಕ ಸೇವೆಯ ಮೂಲಕ ಮನತೃಪ್ತಿಯೊಂದಿಗೆ ಸಂಭ್ರಮಿಸುವುದನ್ನೂ ರೋಟರಿ ಸಂಸ್ಥೆಗಳು ಕಲಿಸುತ್ತವೆ ಎಂದು ರೋಟರಿ ಜಿಲ್ಲೆ ೩೧೮೧ನ ಗವರ್ನರ್ ಎಚ್.ಆರ್.ಕೇಶವ್ ಹೇಳಿದರು.


ಮಡಿಕೇರಿ ರೋಟರಿ ವುಡ್ಸ್‌ಗೆ ಅಧಿಕತ ಭೇಟಿ ನೀಡಿದ ಸಂದರ್ಭ ನಗರದ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ರೋಟರಿ ಸಂಸ್ಧೆಗಳು ಸಾಕಷ್ಟು ಚೈತನ್ಯದಾಯಿತ್ವದೊಂದಿಗೆ ಬೇರೆ ಸಂಸ್ಥೆಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ. ೨ನೇ ವರ್ಷದಲ್ಲಿ ಸಾಗುತ್ತಿರುವ ರೋಟರಿ ವುಡ್ಸ್ ಇದನ್ನೇ ಸಾಬೀತುಪಡಿಸಿದೆ ಎಂದರು.


ರೋಟರಿ ವಲಯ ಸಹಾಯಕ ಗವರ್ನರ್ ದೇವಣಿರ ತಿಲಕ್ ಮಾತನಾಡಿ, ಅಂಗನವಾಡಿಗಳ ಕಾಯಕಲ್ಪಕ್ಕೆ ರೋಟರಿ ಜಿಲ್ಲೆ ೩೧೮೧ ವಿಶೇಷ ಯೋಜನೆಗಳನ್ನು ರೂಪಿಸಿದೆ. ಅಧ್ಯಕ್ಷರು, ಕಾರ್ಯದರ್ಶಿ ಜತೆ ಎಲ್ಲಾ ರೋಟರಿ ಸದಸ್ಯರು ಕೈಜೋಡಿಸಿದರೆ ಸಾಮಾಜಿಕ ಸೇವಾ ಕಾರ್ಯಗಳು ಸುಗಮವಾಗಿ ಸಾಗುತ್ತವೆ ಎಂದೂ ತಿಲಕ್ ಹೇಳಿದರು.


ರೋಟರಿ ವುಡ್ಸ್‌ಗೆ ಇದೇ ಸಂದರ್ಭ ೭ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಈ ನಿಟ್ಟಿನಲ್ಲಿ ರಾಜ್ಯಪಾಲ ಕೇಶವ್ ರೋಟರಿ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್‌ರರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.


ರೋಟರಿ ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್, ಕಾರ್ಯದರ್ಶಿ ಹರೀಶ್ ಕಿಗ್ಗಾಲು ವೇದಿಕೆಯಲ್ಲಿದ್ದರು. ರೋಟರಿಯ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.