ಮೈಸೂರು: ರೋಟರಿ ಸಂಸ್ಥೆ ಸಾಮಾಜಿಕ ಸಮುದಾಯಗಳ ಒಳಿತಿಗಾಗಿ ಇರುವ ಒಂದು ವಿಶೇಷವಾದ ಸಂಸ್ಥೆಯಾಗಿದ್ದು, ನೊಂದವರಿಗೆ ಸಹಕಾರ ನೀಡಿ ನೆರವಿನ ಹಸ್ತ ಚಾಚುತ್ತಾ ಬಂದಿದೆ ಎಂದು ರೋಟರಿ ಸಂಸ್ಥೆ 3181ರ ನಿಕಟಪೂರ್ವ ಜಿಲ್ಲಾ ಗವರ್ನರ್ ಅದ ರೋಟರಿ ದತ್ತಿ ನಿಧಿಯ ಜಿಲ್ಲಾಧ್ಯಕ್ಷ ಎಂ.ರಂಗನಾಥ ಭಟ್ ಹೇಳಿದರು.
ರೋಟರಿ ಐವರಿ ಸಿಟಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ನೊಂದವರಿಗೆ ಆಶ್ರಯ ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ರೋಟರಿ ಸಂಸ್ಥೆಯ ಸಾಮಾಜಿಕ ಕಳಕಳಿ ಮತ್ತು ಮುಖ್ಯ ಗುರಿಯಾಗಿದೆ. ಪ್ರಸ್ತುತ ದಿನಗಳಲ್ಲಿ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿರುವ ನೂರಾರು ಕುಟುಂಬಗಳನ್ನು ಕಾಣುತ್ತಿದ್ದೇವೆ. ಅಂತಹ ದುಃಖಭರಿತ ಕುಟುಂಬಗಳನ್ನು ಗುರುತಿಸಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಕೈಲಾದ ನೆರವು ನೀಡುತ್ತಾ ಬರುತ್ತಿರುವುದು ತೃಪ್ತಿ ತಂದಿದೆ ಎಂದರು.
ರೋಟರಿ ಅಂಗ ಸಂಸ್ಥೆಗಳು ಸೇರಿ ಚಾಮರಾಜನಗರದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿ ಬಡ ಅನಾರೋಗ್ಯ ಪೀಡಿತರ ಸೇವೆಗೆ ಮುಂದಾಗಿರುವುದನ್ನು ಶ್ಲಾಘನೀಯ ಕಾರ್ಯ. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ಹೇಳಿದರು.
ರೋಟರಿ ಐವರಿ ಸಿಟಿಯ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಕೇಶವ್ ಕಾಂಚನ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಾಮಾಜಿಕ ಹಾಗೂ ಶೈಕ್ಷಣಿಕ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಹತ್ತು ಹಲವು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಸಿವುಮುಕ್ತ ಜೀವನ, ರೋಗಮುಕ್ತ ಜನ, ಪರಿಸರವನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತೇವೆ ಎಂದು ತಿಳಿಸಿದರು.
ರೋಟರಿ ಐವರಿ ಸಿಟಿಯ ನೂತನ ಕಾರ್ಯದರ್ಶಿಗಳಾಗಿ ಎಂ.ಕೆ.ಮುಖೇಶ್, ಉಪಾಧ್ಯಕ್ಷರಾಗಿ ಎಸ್.ಬಾಲಚಂದರ್, ಖಜಾಂಚಿಯಾಗಿ ಎಂ.ಪೆರುಮಾಳ್, ವೃತ್ತಿಪರ ಸೇವೆಗಳ ನಿರ್ದೇಶಕರಾಗಿ ತೇನ್ ಪೆರುಮಾಳ್, ಕ್ಲಬ್‌ನ ಸೇವೆಗಳ ನಿರ್ದೇಶಕರಾಗಿ ಲತಾಸಚ್ಚಿ, ಅಂತಾರಾಷ್ಟ್ರೀಯ ಸೇವೆಗಳ ನಿರ್ದೇಶಕರಾಗಿ ಡಾ.ಜಿ.ಎಲ್.ಶೇಖರ್, ಯುವಜನ ಸೇವೆಗಳ ನಿರ್ದೇಶಕರಾಗಿ ಜ್ಯೋತಿಮುಖೇಶ್, ಸಮುದಾಯ ಸೇವೆಗಳ ನಿರ್ದೇಶಕರಾಗಿ ಶಬನಾಇಫ್ತಿಕರ್ ಪದಗ್ರಹಣ ಸ್ವೀಕರಿಸಿದರು. ಕ್ಲಬ್‌ನ ಜಿಲ್ಲಾ ಸಹಾಯಕ ಗವರ್ನರ್ ಆಗಿ ಬಿ.ಹರೀಶ್ ಇದೇ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡರು.
ಸಮಾಜ ಹಾಗೂ ವೈದ್ಯಕೀಯ ಸೇವೆಯನ್ನು ಗುರುತಿಸಿ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಡಾ.ಎಂ.ಆರ್. ಸೀತಾರಾಮ್, .ಡಾ.ಕೆ.ಎಸ್.ಕುಮಾರ್, ಕಾಮಾಕ್ಷಿ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ.ಪ್ರಕಾಶ್‌ಪ್ರಭು, ಡಾ.ರೂಪ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಕೆ.ಶಶಿಧರ್, ರೋಟರೇರಿಯನ್‌ಗಳಾದ ಶೋಭಾನಾಗರಾಜ್, ಪೂಜಾ ಬಾಳಿಗಾ, ರಚನಾ ನಾಗೇಶ್, ಸುನೀಲ್ ಬಾಳಿಗಾ, ಡಾ.ರವಿಶಂಕರ್, ಇಫ್ತಿಕರ್ ಅಹಮದ್, ಪ್ರಸಾದ್ ಬಾಬು, ಆಶಾಶೇಖರ್, ಎಚ್.ಎಸ್.ಲಕ್ಷ್ಮಿ, ವಿ.ಎನ್.ಪ್ರಸಾದ್ ಇತರರು ಇದ್ದರು.