ಜಿಲ್ಲೆ

ಸೇವಾ ಗುಣಕ್ಕೆ ವಿಶ್ವದಲ್ಲಿಯೇ ರೋಟರಿ ಮಾದರಿ: ಅನಿಲ್

ಮಡಿಕೇರಿ: ಸ್ವಾರ್ಥ ಮೀರಿದ ಸೇವಾ ಗುಣಗಳಿಗೆ ರೋಟರಿ ವಿಶ್ವದಲ್ಲಿಯೇ ಮಾದರಿಯಾದ ಪರಿಣಾಮ ವಿಶ್ವವ್ಯಾಪಿ ೧೨ ಲಕ್ಷ ಸದಸ್ಯರು ರೋಟರಿ ಸಂಸ್ಥೆಯಲ್ಲಿನ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ನಿರತರಾಗಿದ್ದಾರೆ ಎಂದು ರೋಟರಿ ಜಿಲ್ಲೆ ೩೧೮೧ರ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಹೇಳಿದರು.


ನಗರದ ರೋಟರಿ ಸಭಾಂಗಣದಲ್ಲಿ ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ರೋಟರಿ ಸಂಸ್ಥೆಯ ೧೧೮ನೇ ವಾರ್ಷಿಕೋತ್ಸವ ಸಂದರ್ಭ ಮಾತನಾಡಿದ ಅವರು, ೧೯೦೫ರ ಫೆ೨೩ ರಂದು ಚಿಕಾಗೋದ ಪುಟ್ಟ ಕೋಣೆಯಲ್ಲಿ ಪೌಲ್ ಹಾರಿಸ್ ಮತ್ತು ವಿವಿಧ ವತ್ತಿಯಲ್ಲಿನ ಅವರ ೪ ಸ್ನೇಹಿತರಿಂದ ಪ್ರಾರಂಭಗೊಂಡ ರೋಟರಿ ಸಂಸ್ಥೆ ಇದೀಗ ಜಗತ್ತಿನ ಅತೀ ದೊಡ್ಡ ಸಾಮಾಜಿಕ ಸೇವಾ ಸಂಸ್ಥೆಯಾಗಿ ಬೆಳೆದಿದೆ. ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಮುಂತಾದ ಕಾರ್ಯಯೋಜನೆಗಳಲ್ಲಿ ರೋಟರಿ ಕೆಲಸ ಗಮನಾರ್ಹವಾದದ್ದು ಎಂದರು.


೨೨೫ ದೇಶಗಳ ೩೬ ಸಾವಿರ ರೋಟರಿ ಸಂಸ್ಥೆಗಳಲ್ಲಿ ಸಾಮಾಜಿಕ ಸೇವಾ ಕಾರ್ಯಯೋಜನೆ ಜರುಗುತ್ತಿದೆ. ಹೀಗಾಗಿಯೇ ವಿಶ್ವವ್ಯಾಪಿ ರೋಟರಿಯು ವಿಶ್ವಸಾರ್ಹ ಮತ್ತು ಪಾರದರ್ಶಕ ಕಾರ್ಯಯೋಜನೆಗಳಿಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು.


ರೋಟರಿ ವುಡ್ಸ್ ಗೌರವ ಸಲಹೆಗಾರ ಬಿ.ಜಿ.ಅನಂತಶಯನ ಮಾತನಾಡಿ, ಸೈನ್ಯದಲ್ಲಿರುವಂತೆ ರೋಟರಿಯಲ್ಲಿಯೂ ಸಮಯಪಾಲನೆ ಮತ್ತು ಶಿಸ್ತಿಗೆ ಪ್ರಾಮುಖ್ಯತೆ ಇದೆ. ಇದರಿಂದಾಗಿ ರೋಟರಿ ಸಂಸ್ಥೆಗಳಲ್ಲಿ ಉದ್ದೇಶಿತ ರೀತಿಯಲ್ಲಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗುತ್ತದೆ ಎಂದರು.


ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್.ಸಂಪತ್ ಕುಮಾರ್ ಮಾತನಾಡಿ, ರೋಟರಿಯಂಥ ಮಹಾನ್ ಸಂಸ್ಥೆಗೆ ೧೧೮ ವರ್ಷಗಳು ತುಂಬಿದ ಸಂಭ್ರಮವನ್ನು ಸಂಸ್ಥೆಯ ಸದಸ್ಯರೆಲ್ಲಾ ಒಗ್ಗೂಡಿ ಆಚರಿಸುವುದು ಮಹತ್ವದ್ದಾಗಿದೆ. ಇಂಥ ಆಚರಣೆಗಳು ರೋಟರಿ ಕುರಿತು ಮತ್ತಷ್ಟು ಬದ್ಧತೆಗೆ ಕಾರಣವಾಗುತ್ತದೆ ಎಂದರು.


ರೋಟರಿ ವುಡ್ಸ್ ಕಾರ್ಯದರ್ಶಿ ವಸಂತ್ ಕುಮಾರ್, ಪ್ರಮುಖತಾದ ರಂಜಿತ್ ಕಿಗ್ಗಾಲು, ಪ್ರಶಾಂತ್, ಬೋಪಣ್ಣ ಸೇರಿದಂತೆ ರೋಟರಿ ವುಡ್ಸ್ ನಿರ್ದೇಶಕರು, ಸದಸ್ಯರು ಹಾಜರಿದ್ದರು.