ಜಿಲ್ಲೆ

ಸ್ವಾರ್ಥರಹಿತ ಸಮಾಜಸೇವೆಗೆ ರೋಟರಿ ಸದಸ್ಯರು ಸದಾ ಮಾದರಿ: ಕೆ.ಜಿ.ಬೋಪಯ್ಯ ಶ್ಲಾಘನೆ

ಮಡಿಕೇರಿ: ಸ್ವಾರ್ಥರಹಿತವಾಗಿ ಸಮಾಜಸೇವೆಗೆ ಕಟಿಬದ್ದರಾಗಿರುವ ರೋಟರಿ ಸದಸ್ಯರು ಸೇವೆಗೆ ಮಾದರಿಯಾಗಿದ್ದಾರೆ. ಸೇವೆಗೆ ಮುಖ್ಯವಾಗಿರುವ ಆರೋಗ್ಯವನ್ನು ಕ್ರೀಡಾಚಟುವಟಿಕೆ ಮೂಲಕ ಗಳಿಸಲು ಸಾಧ್ಯ ಎಂದು ವಿರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ಶ್ಲಾಘಿಸಿದರು.


ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ ರೋಟರಿ ಜಿಲ್ಲಾ ಕ್ರೀಡಾಕೂಟ ಕ್ರೀಡಾಸಿರಿಯನ್ನು ದ್ವಜಾರೋಹಣದ ಮೂಲಕ ಉದ್ಘಾಟಿಸಿ ಮಾತನಾಡಿದರು.


ಸಮಾಜದಲ್ಲಿ ರೋಟರಿ ತನ್ನದೇ ಆದ ರೀತಿಯಲ್ಲಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಂಡುಕೇಳರಿಯದ ಅತಿವಷ್ಟಿಯಾದಾಗಲೂ ಸಂಕಷ್ಟದಲ್ಲಿದ್ದ ಜನರಿಗೆ ವೈದ್ಯಕೀಯ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ರೋಟರಿ ತನ್ನ ಅಮೂಲ್ಯ ಸೇವೆ ಮಾಡಿದೆ. ಸಂಕಷ್ಟದಲ್ಲಿದ್ದವರಿಗೆ ಮಾದರಿಯಾಗಿ ಸ್ಪಂದಿಸಿದೆ ಎಂದರು.


ರೋಟರಿ ಜಿಲ್ಲಾ ಕ್ರೀಡಾಕೂಟದ ಮೂಲಕ ರೋಟರಿ ಸದಸ್ಯರು ತಮ್ಮಲ್ಲಿನ ಕ್ರೀಡಾಪ್ರತಿಭೆಯನ್ನು ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದ ಅವರು, ಉತ್ತಮ ಆರೋಗ್ಯ, ಗಟ್ಟಿ ಮನಸ್ಸುಗಳಿಗೆ ಕ್ರೀಡಾಚಟುವಟಿಕೆ ಹೆಚ್ಚು ಸಹಕಾರಿಯಾಗಿದೆ. ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.


ರೋಟರಿ ಜಿಲ್ಲೆ ೩೧೮೧ನ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ, ನಿತ್ಯ ಉಲ್ಲಾಸದಿಂದ ಇರಲು ಕ್ರೀಡೆ ಅತೀ ಮುಖ್ಯ ಪಾತ್ರವಹಿಸುತ್ತದೆ. ಯಾವುದೇ ಕೋಪತಾಪ ನಿವಾರಣೆಗೂ ಕ್ರೀಡಾಚಟುವಟಿಕೆಗಳೇ ಕಾರಣ. ಸೋಲು ಗೆಲುವಿಗೆ ಸೋಪಾನವಾಗುತ್ತದೆ. ಸೋಲನ್ನು ಗೆಲುವಾಗಿ ಬಳಸಿಕೊಳ್ಳುವ ಚತುರತೆಯನ್ನು ಕ್ರೀಡೆ ಕಲಿಸಿಕೊಡುತ್ತದೆ ಎಂದರುರಲ್ಲದೇ, ಧೈರ್ಯ, ಸ್ಥೆರ್ಯ, ಇಚ್ಚಾಶಕ್ತಿ, ಮನೋಶಕ್ತಿಗೆ ಕ್ರೀಡೆ ಸಹಕಾರಿ ಎಂದೂ ಹೇಳಿದರು.


ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿ, ವ್ಯಕ್ತಿಯ ಸರ್ವಾಂಗೀಣ ಪ್ರಗತಿಗೆ ಕಾರಣವಾಗಿರುವ ಕ್ರೀಡೆಗಳಿಗೆ ರೋಟರಿ ಕೂಡ ಉತ್ತೇಜನ ನೀಡುತ್ತಾ ಬಂದಿರುವುದು ಶ್ಲಾಘನೀಯ. ರೋಟರಿ ಸಂಸ್ಥೆಗಳಿಂದಲೂ ನಾಡಿಗೆ ಉತ್ತಮ ಕ್ರೀಡಾಪಟುಗಳು ಕೊಡುಗೆಯಾಗಿ ದೊರಕಲಿ ಎಂದು ಹಾರೈಸಿದರು.


ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಕ್ರೀಡಾಸಿರಿಯ ಆಯೋಜಕ ಸಮಿತಿ ಅಧ್ಯಕ್ಷ ದೇವಣಿರ ತಿಲಕ್, ಸಹಾಯಕ ಗವರ್ನರ್ ರತನ್ ತಮ್ಮಯ್ಯ, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್, ರೋಟರಿ ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗಡೆ, ವಿಶ್ವಾಶ್ ಶೆಣೈ, ಸಹಾಯಕ ಗವರ್ನರ್ ಎಸ್.ಕೆ.ಸತೀಶ್, ವಲಯ ಸೇನಾನಿ ಎನ್.ಡಿ.ಅಚ್ಚಯ್ಯ ವೇದಿಕೆಯಲ್ಲಿದ್ದರು.


೮೯ ರೋಟರಿ ಕ್ಲಬ್ ಬಾಗಿ: ರೋಟರಿ ಮಿಸ್ಟಿ ಹಿಲ್ಸ್ ಕ್ರೀಡಾಸಮಿತಿ ಪ್ರಮುಖರಾದ ಗಾನಾ ಪ್ರಶಾಂತ್, ಪಿ.ಎಂ.ಸಂದೀಪ್, ಕೋಚನ ಲವೀನ್ ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ತಂದರು. ರೋಟರಿ ಜಿಲ್ಲೆ ೩೧೮೧ಗೆ ಸೇರಿದ ಮೈಸೂರು, ಕೊಡಗು, ದಕ್ಷಿಣ ಕನ್ನಡ, ಚಾಮರಾಜನಗರಗಳಿಗೆ ಸೇರಿದ ೮೯ ರೋಟರಿ ಕ್ಲಬ್‌ಗಳಿಂದ ನೂರಾರು ಸಂಖ್ಯೆಯಲ್ಲಿ ರೋಟರಿ ಸದಸ್ಯ ಕ್ರೀಡಾಪಟುಗಳು ಕ್ರೀಡಾಸಿರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.


ರೋಟರಿ ಜಿಲ್ಲಾ ಕ್ರೀಡಾಸಮಿತಿ ಅಧ್ಯಕ್ಷ ಬಿ.ಕೆ.ರವೀಂದ್ರ ರೈ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್, ಚೆಸ್, ಕೇರಂ, ಗಾಲ್ಫ್, ಅಥ್ಲೆಟಿಕ್ಸ್ ಕ್ರೀಡೆಗಳನ್ನು ರೋಟರಿ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ. ಮಡಿಕೇರಿಯಲ್ಲಿ ಆಯೋಜಿತ ಅಂತಿಮ ಪಂದ್ಯಾವಳಿಯಲ್ಲಿ ೩೫೦ ರಷ್ಟು ರೋಟರಿ ಸದಸ್ಯ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.