ಜಿಲ್ಲೆ

ಚಿಣ್ಣರ ಉತ್ಸವದಲ್ಲಿ ಸಂಭ್ರಮಿಸಿದ ಆರೈಕೆ ಕೇಂದ್ರದ ಮಕ್ಕಳು ರೋಟರಿ 23ನೇ ವಾರ್ಷಿಕ ಚಿಣ್ಣರ ಉತ್ಸವದಲ್ಲಿ ಸಂಭ್ರಮ


ಮಂಗಳೂರು: ಮುಗ್ದ ಮಕ್ಕಳಿಗೆ ಪೋಷಕರ ಪ್ರೀತಿ, ವಾತ್ಸಲ್ಯವಿಲ್ಲ. ಬಂಧುಗಳ ಆತ್ಮೀಯತೆ ಇಲ್ಲ. ರಕ್ತಸಂಬಂಧಿಗಳ ಒಡನಾಡವಿಲ್ಲ. ಅಂತರಾಳದಲ್ಲಿ ನೂರಾರು ನೋವುಗಳು ಹುದುಗಿದ್ದರೂ ಅವೆಲ್ಲವನ್ನು ಮರೆತು ಕ್ರೀಡಾ, ಸಾಮರ್ಥ್ಯ ಪ್ರದರ್ಶಿಸಿ ಸಂಭ್ರಮಿಸಿದರು. ಇತರ ಕೇಂದ್ರಗಳ ಮಕ್ಕಳ ಜತೆ ಬೆರೆತು ಸಿಹಿ, ಕಹಿ ಅನುಭವ ಹಂಚಿಕೊಂಡರು. ಉತ್ಸಾಹದಿಂದ ಮುಕ್ತವಾಗಿ ಕುಣಿದು ಕುಪ್ಪಳಿಸಿದರು.


ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ‌್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ರೋಟರಿ 23 ವಾರ್ಷಿಕ ಅಂತರ ಮಕ್ಕಳ ರಕ್ಷಣಾ ಮತ್ತು ಆರೈಕೆ ಕೇಂದ್ರದ ಚಿಣ್ಣರ ಉತ್ಸವದಲ್ಲಿ ಭಾನುವಾರ ಉರ್ವ ಕೆನರಾ ಹೈಸ್ಕೂಲ್ ಆವರಣದಲ್ಲಿ ಕಂಡು ಬಂದ ದೃಶ್ಯ.


ಮಂಗಳೂರು ನಗರದ ಸುತ್ತಮುತ್ತ ಕಾರ್ಯಚರಿಸುತ್ತಿರುವ 10 ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರದ ಸುಮಾರು 400 ಮಕ್ಕಳು ಈ ಸಂಭ್ರಮದಲ್ಲಿ ಪಾಲ್ಗೊಂಡರು. ಆಕರ್ಷಕ ಪಥ ಸಂಚಲನ ನಡೆಸಿದರು. ವಿವಿಧ ತಿನಿಸುಗಳನ್ನು ಮೆಲ್ಲುತ್ತಾ ಮಂದಹಾಸ ಬೀರಿದರು.


ನಿರ್ದಿಷ್ಟ ಗುರಿ ಹೊಂದಲು ಮೇಯರ್ ಕರೆ
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉತ್ಸವ ಉದ್ಘಾಟಿಸಿದರು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು, ಅದರಲ್ಲಿ ಯಶಸ್ಸು ಸಾಧಿಸಲು ಉತ್ತಮ ಗುರುವನ್ನು ಹೊಂದಿರಬೇಕು. ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡುವ ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಪ್ರಶಂಸನೀಯ ಎಂದರು.
ಸಂಘಟನಾ ಅಧ್ಯಕ್ಷ ಡಾ.ದೇವದಾಸ್ ರೈ ಮಾತನಾಡಿ, 23ನೇ ವಾರ್ಷಿಕ ಚಿಣ್ಣರ ಉತ್ಸವ ಕಾರ್ಯಕ್ರಮವು ತಮ್ಮ ಸಂಸ್ಥೆಯ ಪ್ರತಿಷ್ಠಿತ ಸಮಾಜದ ಶ್ರೇಯೋಭಿವೃದ್ಧಿ ಸೇವಾ ಚಟುವಟಿಕೆಯ ಅಂಗವಾಗಿದ್ದು, ಮಕ್ಕಳ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಒದಗಿಸಿ ಅವರ ಉತ್ಸಾಹಕ್ಕೆ ಸ್ಪಂದಿಸಿ, ಪ್ರೋತ್ಸಾಹಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುವುದು ನಮ್ಮ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ ಎಂದರು.


ಸಂಸ್ಥೆಯ ಅಧ್ಯಕ್ಷ ರಾಜೇಶ್ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ರೋಟರಿ ಸಹಾಯಕ ಗವರ್ನರ್ ಸುಭೋದ್ ಕುಮಾರ್ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರ‌್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ಅವಿನಾಶ್ ಕುಲಾಲ್, ಕಾರ್ಯದರ್ಶಿ ಅಕ್ಷಯ್ ರೈ ಉಪಸ್ಥಿತರಿದ್ದರು. ರೋಟರಿ ಸಂಸ್ಥೆಯ ಕಾರ್ಯದರ್ಶಿ ರವಿ ಜಲನ್ ವಂದಿಸಿದರು. ಕೆ.ಎಂ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.


ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ಎಚ್. ಆರ್. ಕೇಶವ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.