ಮಡಿಕೇರಿ:
ವಿಶ್ವ ಪೋಲಿಯೊ ನಿರ್ಮೂಲನಾ ದಿನದ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ನಗರದ ಹಲವಾರು ಕಡೆಗಳಲ್ಲಿ ಶುಕ್ರವಾರ ಪೋಲಿಯೊ ನಿರ್ಮೂಲನ ಸಂದೇಶದ ಪೋಸ್ಟರಗಳನ್ನು ಅಳವಡಿಸಲಾಯಿತು.
ನಗರಸಭಾಧ್ಯಕ್ಷೆ ಕಲಾವತಿ ಈ ಅಭಿಯಾನಕ್ಕೆ ನಗರಸಭೆ ಮುಂಬದಿ ಚಾಲನೆ ನೀಡಿದರು. ಪ್ರತೀ ಮನೆಯಲ್ಲಿಯೂ ಎರಡರಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿಕೊಳ್ಳುವಂತೆ ಕಲಾವತಿ ಮನವಿ ಮಾಡಿದರು. ರೋಟರಿ ವುಡ್ಸ್ ವತಿಯಿಂದ ಸಾರ್ವಜನಿಕರಲ್ಲಿ ಜಾಗ್ರತಿ ಉಂಟು ಮಾಡುವ ಈ ವಿನೂತನ ಅಭಿಯಾನವನ್ನು ಶ್ಲಾಘಿಸಿದರು.
ವಿಶ್ವದಾದ್ಯಂತ ಪೊಲಿಯೋ ನಿರ್ಮೂಲನೆಯಲ್ಲಿ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು ಲಕ್ಷಾಂತರ ಮಕ್ಕಳು ವಿಶೇಷಚೇತನರಾಗುವುದನ್ನು ಪೊಲಿಯೋ ನಿರೋಧಕ ಲಸಿಕೆ ಮೂಲಕ ರೋಟರಿ ತಪ್ಪಿಸಿದೆ ಎಂದು ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾಹಿತಿ ನೀಡಿದರು.
ಜನರಲ್ಲಿ ಜಾಗೃತಿ ಉಂಟು ಮಾಡುವ ನಿಟ್ಟಿನಲ್ಲಿ ರೋಟರಿ ವುಡ್ಸ್ ವತಿಯಿಂದ ನಗರವ್ಯಾಪ್ತಿಯಲ್ಲಿ ಜಾಗೃತಿ ಸಂದೇಶದ ಪೋಸ್ಟರ್, ಬ್ಯಾನರ್ ಅಳವಡಿಸಲಾಗಿದೆ ಎಂದೂ ಕಿರಣ್ ಹೇಳಿದರು.
ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ, ನಿರ್ದೇಶಕರಾದ ಕೆ. ವಸಂತ್ ಕುಮಾರ್, ಧನಂಜಯ ಶಾಸ್ತ್ರಿ, ಪಿ. ರವಿ ಮತ್ತಿತರರು ಇದ್ದರು.