ಕುಶಾಲನಗರ:
ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ಇಲ್ಲಿನ ರೈತ ಭವನದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಪದಗ್ರಹಣ ಸಮಾರಂಭ ಹಾಗೂ ರೋಟರಿ ಸಂಸ್ಥೆ 50ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಹಸಿದವರಿಗೆ ಅನ್ನ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ರೋಟರಿ ಸಂಸ್ಥೆ ಹಾಗೂ ನಿಸರ್ಗ ಹೊಟೇಲ್ ಸಹಯೋಗದೊಂದಿಗೆ ಕಾರ್ಯರೂಪಕ್ಕೆ ಬಂದಿರುವ ಈ ಯೋಜನೆಗೆ ಹಿರಿಯ ರೋಟರಿ ಸದಸ್ಯ ಎಸ್.ಕೆ. ಸತೀಶ್ ಚಾಲನೆ ನೀಡಿದರು.
ಜಿಲ್ಲಾ ರೋಟರಿ ಸಂಸ್ಥಾಪಕರೂ ಆದ ಪದಗ್ರಹಣ ಅಧಿಕಾರಿ ಎಂ. ರಂಗನಾಥ್ ಭಟ್ 2025-26ನೇ ಸಾಲಿನ ಕುಶಾಲನಗರ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಮನುಪೆಮ್ಮಯ್ಯ, ಕಾರ್ಯದರ್ಶಿ ಎಚ್.ಪಿ. ಮಂಜುನಾಥ್ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ರೋಟರಿ ಸದಸ್ಯರು ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಾನು, ನನ್ನ ಏಳಿಗೆ ಆದರೆ ಸಾಲದು. ಸಮುದಾಯದ ಅಭಿವೃದ್ಧಿ ಕೂಡ ಆಗಬೇಕು ಎಂಬುದೇ ರೋಟರಿ ಧ್ಯೇಯ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ನಡೆಸುತ್ತಿರುವ ಸಮಾಜಮುಖಿ ಕೆಲಸ ಎಲ್ಲರಿಗೂ ಮಾದರಿಯಾಗಿದೆ. ಅದೇ ರೀತಿ ಕುಶಾಲನಗರ ರೋಟರಿ ಸಂಸ್ಥೆ 50ನೇ ವಸಂತಕ್ಕೆ ಕಾಲ್ಲಿಟ್ಟಿರುವುದು ಹರ್ಷ ತಂದಿದೆ. ರೋಟರಿ ಸಂಸ್ಥೆ ಹಲವು ದಶಕಗಳಿಂದ ಸಾಮಾಜಿಕ ಚಟುವಟಿಕೆ ಮಾಡುವ ಮೂಲಕ ಜನ ಮಾನಸದಲ್ಲಿ ಉಳಿದಿದೆ ಎಂದರು.
ರೋಟರಿ ಸಂಸ್ಥೆ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಮನುಪೆಮ್ಮಯ್ಯ, ಕುಶಾಲನಗರ ರೋಟರಿ ಸುವರ್ಣ ಮಹೋತ್ಸವಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಜಿಲ್ಲೆಯ ಟೋಲ್ ಗೇಟ್ ಕಾವೇರಿ ಪ್ರತಿಮೆ ಬಳಿ ಸ್ವಾಗತ ಕಮಾನು ಹಾಕಲು ಯೋಜಿಸಲಾಗಿದೆ. ಪ್ರವಾಸೋದ್ಯಮ ಜಿಲ್ಲೆಯಾದ ಕೊಡಗಿನಲ್ಲಿ ಪ್ಲಾಸ್ಟಿಕ್ ಬಾಟಲ್ ನಿಷೇಧಕ್ಕೆ ರೋಟರಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದರು.
ಈ ಸಂದರ್ಭ ಸಹಾಯಕ ಪ್ರಾಂತಪಾಲ ಉಲ್ಲಾಸ ಕೃಷ್ಣ, ಮಾಜಿ ಸಹಾಯಕ ಪ್ರಾಂಥಪಾಲ ಡಾ. ಹರೀಶ್ ಶೆಟ್ಟಿ, ಝೋನಲ್ ಲೆಫ್ಟಿನೆಂಟ್ ಎಂ.ಎA. ಪ್ರಕಾಶ್ ಕುಮಾರ್, ಡಾ. ಎಚ್.ವಿ. ರಾಕೇಶ್ ಪಾಟೇಲ್, ಸ್ಥಳೀಯ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಸಿ.ಬಿ. ಹರೀಶ್, ಮಾಜಿ ಕಾರ್ಯದರ್ಶಿ ಡಿ.ಡಿ. ಕಿರಣ್ ಇದ್ದರು.