ಬೆಂಗಳೂರು: ಐಎಂಎ ಕೇಸ್ನಲ್ಲಿ 200 ಕೋಟಿ ರೂಪಾಯಿ ಡೀಲ್ ಕುದುರಿಸಿ ಸಂಕಷ್ಟಕ್ಕೆ ಸಿಲುಕಿರುವ ಮಾಜಿ ಸಚಿವ ರೋಷನ್ ಬೇಗ್ಗೆ ಸೆರೆವಾಸಕ್ಕೆ ಒಗ್ಗಿಕೊಳ್ಳೋದು ಕಷ್ಟವಾಗ್ತಿದೆಯಂತೆ.. ಐಷಾರಾಮಿ ಶೈಲಿಯಲ್ಲಿ ಬದುಕುತ್ತಿದ್ದ ಬೇಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಆಪ್ತರ ಬಳಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಬೇಗ್ಗೂ ನಂಗೂ ಸಂಬಂಧ ಇಲ್ಲ ! ಐಎಂಎ ಹಗರಣಕ್ಕೆ ಸಂಬಂಧಿಸಿ ಬಂಧನವಾಗಿರುವ ರೋಷನ್ ಬೇಗ್ಗೂ ನಮಗೂ ಸಂಬಂಧವಿಲ್ಲ. ಅವರು ನಮ್ಮ ಪಕ್ಷದಲ್ಲೂ ಇಲ್ಲ. ಹಣಕಾಸಿನ ವಿಚಾರ ಅವರ ವೈಯಕ್ತಿಕ. ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ. ಹಗರಣದಲ್ಲಿ ಜಮೀರ್ ಅಹ್ಮದ್ ಭಾಗಿಯಾಗಿದ್ದಾರೆನ್ನುವ ಆರೋಪಕ್ಕೆ ಸಂಬಂಧಿಸಿ ಎಸ್ಐಟಿ ಈಗಾಗಲೆ ಅವರ ವಿಚಾರಣೆ ನಡೆಸಿದೆ. | ಸಿದ್ದರಾಮಯ್ಯ, ಮಾಜಿ ಸಿಎಂ
ಭಾನುವಾರ ರಾತ್ರಿ ಸ್ನೇಹಿತರು ಕಳುಹಿಸಿದ್ದ ಕುಷ್ಕ ಮತ್ತು ಬ್ರೆಡ್ ತಿಂದು ಔಷಧ ಸೇವಿಸಿ ರಾತ್ರಿ 1 ಗಂಟೆಗೆ ಚಾಪೆ ಮೇಲೆ ನಿದ್ದೆಗೆ ಜಾರಿದ್ದರು. ಸೋಮವಾರ ಬೆಳಗ್ಗೆ ದಿನಪತ್ರಿಕೆ ನೀಡುವಂತೆ ಜೈಲು ಸಿಬ್ಬಂದಿಗೆ ಮನವಿ ಮಾಡಿದ್ದರು. 8 ಗಂಟೆಗೆ ಜೈಲಿನ ಮೆನು ಪ್ರಕಾರ ಸಿಬ್ಬಂದಿ ನೀಡಿದ ಉಪ್ಪಿಟ್ಟು ಸೇವಿಸಿದರು. ಬೆಳಗ್ಗೆ 11 ಗಂಟೆಗೆ ಹಾಗೂ ಸಂಜೆ 4 ಗಂಟೆಗೆ ಜೈಲು ಆಸ್ಪತ್ರೆ ವೈದ್ಯರು ಬೇಗ್ ಆರೋಗ್ಯ ತಪಾಸಣೆ ನಡೆಸಿದರು.
ಜಾಮೀನು ಅರ್ಜಿ ಮುಂದೂಡಿಕೆ: ಪ್ರಕರಣದಲ್ಲಿ ರೋಷನ್ ಬೇಗ್ 36ನೇ ಆರೋಪಿಯಾಗಿದ್ದಾರೆ. ಜಾಮೀನಿಗಾಗಿ ಬೇಗ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸಿಟಿ ಸಿವಿಲ್ ನ್ಯಾಯಾಲಯ ನ.25ಕ್ಕೆ ಮುಂದೂಡಿದೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.
ಮನ್ಸೂರ್ 4 ದಿನ ಸಿಬಿಐ ವಶಕ್ಕೆ: ಮನ್ಸೂರ್ ಖಾನ್ನನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮನ್ಸೂರ್ನಿಂದ ಇನ್ನಷ್ಟು ಮಾಹಿತಿ ಕಲೆ ಹಾಕಲು ಮತ್ತೆ 4 ದಿನ ವಶಕ್ಕೆ ನೀಡುವಂತೆ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಲಾಯಿತು. ಅದನ್ನು ಪುರಸ್ಕರಿಸಿದ ನ್ಯಾಯಾಲಯ ನ.27ರ ವರೆಗೆ ಮನ್ಸೂರ್ನನ್ನು ವಶಕ್ಕೆ ನೀಡಿದೆ. ಮತ್ತೊಂದೆಡೆ ಐಎಂಎ ಪ್ರಕರಣದಲ್ಲಿ ಮನ್ಸೂರ್ನಿಂದ ಕೋಟ್ಯಂತರ ರೂ. ಲಂಚ ಪಡೆದು ಸಿಬಿಐ ಬಲೆಗೆ ಬಿದ್ದಿರುವ ಸರ್ಕಾರಿ ನೌಕರ ಕುಮಾರ್ನನ್ನೂ ಸಿಬಿಐ 3 ದಿನಗಳ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.