ಹನೂರು: ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಆಗಮಿಸಿದ ಮಕ್ಕಳನ್ನು ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸಮಿತಿ ಸದಸ್ಯರು ಗುಲಾಬಿ ಹಾಗೂ ಸಿಹಿ ನೀಡಿ ಬರಮಾಡಿಕೊಂಡರು.
ಶಾಲೆಯನ್ನು ತಳಿರು, ತೋರಣ ಹಾಗೂ ಬಣ್ಣಬಣ್ಣದ ರಂಗೋಲಿಯಿಂದ ಸಿಂಗರಿಸಲಾಗಿತ್ತು. ಆವರಣದಲ್ಲಿ ಹಬ್ಬದ ವಾತವರಣ ಮನೆ ಮಾಡಿತ್ತು. ಲವಲವಿಕೆಯಿಂದ ಆಗಮಿಸಿದ್ದ ಮಕ್ಕಳ ಮೊಗದಲ್ಲಿ ಕಲಿಕಾ ಸಂಭ್ರಮ ಮನೆ ಮಾಡಿತ್ತು. ಕೆಲವು ವಿದ್ಯಾರ್ಥಿನಿಯರು ಕಳಸವನ್ನು ಹೊತ್ತು ತಂದದ್ದು, ಶಾಲಾ ಆರಂಭಕ್ಕೆ ಮೆರುಗು ತಂದಿತು. ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ವಿತರಿಸಲಾಯಿತು.
ಈ ವೇಳೆ ಶಿಕ್ಷಣ ಸಂಯೋಜಕ ಚಿನ್ನಪ್ಪಯ್ಯ ಮಾತನಾಡಿ, ಈ ಶಾಲೆಯಲ್ಲಿ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಿದ್ದಾರೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಹಾಗಾಗಿ ಈ ಶಾಲೆ ಜನಪ್ರಿಯವಾಗಿದೆ. ಇದಕ್ಕೆ ಎಲ್‌ಕೆಜಿ ಪ್ರವೇಶಾತಿಗೆ ಬೇಡಿಕೆ ನಿರ್ಮಾಣವಾಗಿರುವುದೇ ಸಾಕ್ಷಿಯಾಗಿದೆ. ಆದ್ದರಿಂದ ಪಾಲಕರು ಈ ಬಗ್ಗೆ ಮನದಟ್ಟು ಮಾಡಿಕೊಂಡು ಮಕ್ಕಳನ್ನು ಶಾಲೆಗೆ ದಾಖಲಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಳಿಕ ಶಾಲಾ ಮಕ್ಕಳು, ಶಿಕ್ಷಕರು ಗ್ರಾಮದ ಮುಖ್ಯ ರಸ್ತೆ ಹಾಗೂ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುವುದರ ಮೂಲಕ ಜಾಥಾ ನಡೆಸಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು. ಮುಖ್ಯಶಿಕ್ಷಕ ಎಂ.ಮಾದೇಶ, ಶಿಕ್ಷಕರಾದ ಲೋಕೇಶ್, ತಾರಾ, ಮೌನಾ, ಸಾವಿತ್ರಿ, ಚಿನ್ನಮುತ್ತಮ್ಮಾಳ್, ಶೋಭಾರಾಣಿ, ಉಷಾರಾಣಿ ಇತರರಿದ್ದರು.