ಮೈಸೂರು: ನಗರದಲ್ಲಿ ಯುವ ಜನರು ಬುಧವಾರ ತಮ್ಮ ಪ್ರೀತಿ, ಪಾತ್ರರಿಗೆ ಗುಲಾಬಿ ಮತ್ತು ವಿವಿಧ ರೀತಿಯ ಉಡುಗೊರೆಗಳನ್ನು ನೀಡುವ ಮೂಲಕ ಪ್ರೇಮಿಗಳ ದಿನವನ್ನು ಸಡಗರದಿಂದ ಆಚರಿಸಿದರು.
ನಗರದ ದೇವರಾಜ ಅರಸು ರಸ್ತೆ, ಸಯ್ಯಜಿರಾವ್ ರಸ್ತೆ, ಕಾಳಿದಾಸ ರಸ್ತೆಗಳಲ್ಲಿನ ಗಿಫ್ಟ್ ಸೆಂಟರ್ ಮತ್ತು ಜುವೆಲ್ಲರಿ ಅಂಗಡಿಗಳಲ್ಲಿ ಪ್ರೇಮಿಗಳು ಉಡುಗೊರೆ ಖರೀದಿಸುವಲ್ಲಿ ಉತ್ಸುಕರಾಗಿದ್ದರು. ಕೆಂಪು ಗುಲಾಬಿ ಹಾಗೂ ಹೂಗುಚ್ಛಗಳ ಮಾರಾಟ ಭರ್ಜರಿಯಾಗಿ ನಡೆಯಿತು.
ನಗರದ ಜವರೇಗೌಡ ಪಾರ್ಕ್, ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ, ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಪಾರ್ಕ್, ಚಾಮುಂಡಿಬೆಟ್ಟ ಸೇರಿದಂತೆ ಅನೇಕ ಉದ್ಯಾನಗಳನ್ನು ಪ್ರೇಮಿಗಳು ಆಕ್ರಮಿಸಿಕೊಂಡಿದ್ದರು. ಇಲ್ಲಿ ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು. ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಪಾರ್ಕ್‌ನಲ್ಲಿದ್ದ ಪ್ರೇಮಿಗಳನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು ಗದರಿಸಿ ಹೊರಗೆ ಕಳುಹಿಸಿದರು. ಪ್ರೇಮಿಗಳು ನಾವು ಇಲ್ಲಿ ಓದಲು ಬಂದಿದ್ದೇವೆ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಆಗ ಪೊಲೀಸರು ಬೆದರಿಸಿ ತಮ್ಮ ಮೊಬೈಲ್‌ಗಳಲ್ಲಿ ಅವರ ಫೋಟೋ ತೆಗೆದು ಹೊರ ಕಳುಹಿಸಿದರು.