ಜಿಲ್ಲೆ

ರೈಲಿನ ಮೇಲೆ ಓಡಲಿದೆ ಕಾರು!!

Uttara Kannada - Subash Hegde

ಕಾರವಾರ: ಕೊಂಕಣ ರೈಲ್ವೆ ನಿಗಮವು ಮುಂಬೈ-ಗೋವಾ ನಡುವೆ ಕಾರ್ ರೋರೋ ಸೇವೆಯನ್ನು ಪರಿಚಯಿಸುತ್ತಿದೆ. ಇದು ರಾಷ್ಟ್ರದಲ್ಲೇ ಮೊದಲ ಪ್ರಯತ್ನವಾಗಿದೆ.

1999ರಿಂದಲೇ ನಿಗಮವು ಗೂಡ್ಸ್ ಲಾರಿಗಳ ರೋರೋ ಸೇವೆ ಕೊಡುತ್ತಿದೆ. ಈಗ ಚೌತಿ ವೇಳೆಯಲ್ಲಿ ಕಾರ್ ರೋರೋ ಸೇವೆ ಆರಂಭಿಸುತ್ತಿದೆ. ಆ.23 ರಂದು ಮುಂಬೈ ಸಮೀಪದ ಕೋಲಾಡ್‌ನಿಂದ ಗೋವಾದ ವೆರ್ನಾವರೆಗೆ ಹಾಗೂ ಆ.24 ರಂದು ವೆರ್ನಾದಿಂದ ಕೋಲಾಡ್ ಕಡೆಗೆ ರೋರೋ ಸೇವೆಗೆ ಚಾಲನೆ ದೊರೆಯಲಿದ್ದು, ಸೆಪ್ಟೆಂಬರ್ 11 ರವರೆಗೆ ಮುಂದುವರಿಯಲಿದೆ. ಇದಕ್ಕಾಗಿ ಒಟ್ಟು 20 ವಿಶೇಷ ವ್ಯಾಗನ್‌ ಗಳನ್ನು ಸಿದ್ಧಪಡಿಸಲಾಗಿದ್ದು, ಒಂದು ವ್ಯಾಗನ್‌ನಲ್ಲಿ 2 ರಂತೆ ಒಟ್ಟು 40 ಕಾರ್‌ಗಳನ್ನು ಒಂದು ರೋರೋ ರೈಲಿನಲ್ಲಿ ಸಾಗಿಸಬಹುದಾಗಿದೆ. ದಿನ ಬಿಟ್ಟು ದಿನ ಕೋಲಾಡ್ ಮತ್ತು ವೆರ್ನಾದಿಂದ ಸಾಯಂಕಾಲ 5 ಗಂಟೆಗೆ ಈ ವಿಶೇಷ ರೈಲು ಬಿಡಲಿದ್ದು, ಮರುದಿನ ಬೆಳಗ್ಗೆ 5 ಗಂಟೆಗೆ ಎಂದರೆ 14 ಗಂಟೆಗಳಲ್ಲಿ ಗಮ್ಮ ಸ್ಥಾನವನ್ನು ತಲುಪಲಿದೆ.

ಈಗಾಗಲೇ ಬುಕ್ಕಿಂಗ್ ಪ್ರಾರಂಭವಾಗಿದ್ದು, ಮೊದಲು 4 ಸಾವಿರ ರೂ. ನೀಡಿ ನೋಂದಣಿ ಮಾಡಿಕೊಳ್ಳಬೇಕಿದೆ. ನಂತರ ಒಂದು ಕಾರಿಗೆ 7875 ರೂ. ನೀಡಿ, ರೈಲಿನ ಮೇಲೆ ಕಾರು ನಿಲ್ಲಿಸಿ, ಊರು ತಲುಪಬಹುದಾಗಿದೆ. ಅಲ್ಲದೇ ಈ ರೈಲಿನ ಜತೆ 3 ಟೈರ್ ಎಸಿ, ಎಸಿ ಚೇರ್ ಕಾರ್ ಸೇರಿ ಪ್ರಯಾಣಿಕರ ಬೋಗಿಗಳೂ ಇರಲಿವೆ. ಒಂದು ಕಾರಿಗೆ ಗರಿಷ್ಠ 3 ಜನರಂತೆ ಹಣ ಪಾವತಿಸಿ ಅದೇ ರೈಲಿನಲ್ಲಿ ತೆರಳಬಹುದಾಗಿದೆ. ಗಣೇಶ ಚತುರ್ಥಿ ವೇಳೆಯಲ್ಲಿ ಟ್ರಾಫಿಕ್ ಜಾಂ, ಮಾಲಿನ್ಯದಿಂದ ಮುಕ್ತವಾಗಲು ರೋರೋ ಸೇವೆಯಿಂದ ಅನುಕೂಲವಾಗಲಿದೆ ಎಂದು ಕೊಂಕಣ ರೈಲ್ವೆ ನಿಗಮದ ಮಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುನೀಲ ನಾರ್ಕರ್ ತಿಳಿಸಿದ್ದಾರೆ.