ಹುಣಸೂರು : ಉತ್ತಮ ಶಿಕ್ಷಣದಿಂದ ಪಡೆದ ಜ್ಞಾನಾರ್ಜನೆಯಿಂದಲೇ ಜೀವನದಲ್ಲಿ ಯಶ ಪಡೆಯಲು ಸಾಧ್ಯ ಎಂದು ಒಸಾಟ್(ಒನ್ ಸ್ಕೂಲ್ ಎಟ್ ಎ ಟೈಮ್)ಸಂಸ್ಥೆ ಪ್ರತಿನಿಧಿ ಮತ್ತು ಸಾಮಾಜಿಕ ಸೇವಾಕರ್ತ ನರೇನ್ ಕುನ್ಯೋಡಿ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಒಸಾಟ್ ಸಂಸ್ಥೆಯ ವತಿಯಿಂದ ನೂತನವಾಗಿ 1 ಕೋಟಿ ರೂ.ವಚ್ಚದಡಿ ನಿರ್ಮಾಣಗೊಂಡ 6 ಶಾಲಾ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪ್ರತಿಯೊಂದು ಪುಟ್ಟ ಮಗುವಿನ ಮನದಲ್ಲೂ ಅದರದ್ದೇ ಆದ ಕನಸುಗಳಿರುತ್ತವೆ. ಆ ಕನಸುಗಳು ನನಸಾಗಲು ಅಗತ್ಯ ಅವಕಾಶಗಳು ದೊರಕಬೇಕು.
ಅವಕಾಶಗಳು ಶಿಕ್ಷಣ ಹೊಂದಿದಾಗ ಮಾತ್ರ ಲಭ್ಯವಾಗಲು ಸಾಧ್ಯ. ಈ ರೀತಿಯ ಶಾಲೆಗಳೇ ಉತ್ತಮ ಕನಸುಗಳನ್ನು ಹೊತ್ತು ಬರುವ ಮನಸುಗಳಿಗೆ ವೇದಿಕೆಗಳಾಬೇಕು. ಹಾಗಾಗಿ ಶಿಕ್ಷಣ ಎಲ್ಲಿ ಸಮೃದ್ಧವಾಗಿರುತ್ತದೋ ಅಲ್ಲಿ ಸಾಧನೆಯ ಶಿಖರವೇರಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಶ್ರೀಕಂಠಯ್ಯನವರ ಕುಟುಂಬ ಒಂದು ಕೋಟಿ ರೂ.ಗಳ ದಾನದೊಂದಿಗೆ ಒಸಾಟ್ ಸಂಸ್ಥೆಯ ಸಹಯೋಗದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದೆ ಎಂದರು.
ದೂರದ ಅಮೇರಿಕದಲ್ಲಿ ನಮ್ಮ ಕುಟುಂಬ ನೆಲಸಿದ್ದರೂ ತಾಯ್ನಡಿನ ಸರ್ಕಾರಿ ಶಾಲೆ ಮಕ್ಕಳ ಪ್ರಗತಿಗೆ ಏನಾದರೂ ಸೇವೆ ಮಾಡಬೇಕು ಎಂಬ ತುಡಿತವೇ ಈ ಸೇವೆಗೆ ಪ್ರೇರಣೆ ನೀಡಿದೆ ಎಂದರು.
ಒಸಾಟ್ ಸಂಸ್ಥೆಯ ನಿರ್ದೇಶಕ ಹರೀಶ್ ಮಾತನಾಡಿ, ದೇಶದಲ್ಲಿ ಈವರೆಗೆ ಒಸಾಟ್ ಸಂಸ್ಥೆ ವತಿಯಿಂದ ಒಟ್ಟು 105 ಶಾಲೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ. 11 ಕಾಮಗಾರಿಗಳು ಪ್ರಗತಿಯಲ್ಲಿದೆ. ಹುಣಸೂರು ತಾಲೂಕಿನಲ್ಲಿ 11 ಶಾಲೆಗಳ ಮೂಲಸೌಕರ್ಯಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ದಾನಿಗಳ ನೆರವಿನೊಂದಿಗೆ ಒಸಾಟ್ ಶಾಲೆಗೆ ಸೇತುವೆಯಾಗಿ ಸೇವೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಎಸ್‌ಡಿಎಂಸಿ ಮೂಲಕ ನಿಧಿಯೊಂದನ್ನು ಸ್ಥಾಪಿಸಿ ಸಾರ್ವಜನಿಕರ ಸಹಕಾರದೊಂದಿಗೆ ಕೊಠಡಿಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ ಮಾತನಾಡಿ, ಶಾಲೆಯ ಮುಖ್ಯಶಿಕ್ಷಕ, ಶಿಕ್ಷಕರ ತಂಡ, ಶಾಲೆಯನ್ನು ದತ್ತುಪಡೆದ ಕರ್ನಾಟಕ ರಕ್ಷಣಾ ವೇದಿಕೆ, ಎಸ್‌ಡಿಎಂಸಿ ಮತ್ತು ಸರ್ಕಾರೇತರ ಸಂಘ, ಸಂಸ್ಥೆಗಳ ಸಹಕಾರದಿಂದ ಇಂದು ಈ ಶಾಲೆ ತಾಲೂಕಿನಲ್ಲೇ ಮಾದರಿ ವಿದ್ಯಾಕೇಂದ್ರವಾಗಿದೆ. ಮುಂಬರುವ ದಿನಗಳಲ್ಲಿ ಶಾಲೆಗೆ ಶಿಕ್ಷಕರ ಕೊರತೆಯಾಗದಂತೆ ಅಥವಾ ಇನ್ಯಾವುದೇ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲಾಗುವುದು. ಈ ಶಾಲೆ ರಾಜ್ಯದಲ್ಲೇ ಮಾದರಿ ಶಾಲೆಯಾಗಬೇಕೆನ್ನುವ ಗುರಿಯೊಂದಿಗೆ ಎಲ್ಲರೂ ಒಂದಾಗಿ ದುಡಿಯೋಣವೆಂದರು.