ಜಿಲ್ಲೆ

ಮಳೆಗೆ ಮನೆಯ ಛಾವಣಿ ಕುಸಿತ

ಕಿರಣ್ ಗೌಡ.ಜಿ

ಕೊಳ್ಳೇಗಾಲ: ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆಯಿಂದ ತಾಲೂಕಿನ ಮುಳ್ಳೂರು ಗ್ರಾಮದ ಮಠದ ಬೀದಿಯ ಮನೆಯೊಂದರ ಛಾವಣಿ ಗುರುವಾರ ಕುಸಿದು ಬಿದ್ದಿದೆ.

ಮುಳ್ಳೂರು ಗ್ರಾಮದ ವಿದ್ಯಾಶಂಕರ್ ಎಂಬುವರ ಮನೆ ಮಳೆಯಿಂದ ಹಾನಿಗೊಳಗಾಗಿದೆ. ಎಂದಿನಂತೆ ವಿದ್ಯಾಶಂಕರ್ ಮತ್ತು ಅವರ ತಾಯಿ ಮನೆಯಲ್ಲಿ ಬುಧವಾರ ಊಟ ಮಾಡಿ ಮಲಗಿದ್ದರು. ಗುರುವಾರ ಬೆಳಗ್ಗೆ ಇದಕ್ಕಿದಂತೆ ಮನೆಯ ಛಾವಣಿ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಬಗ್ಗೆ ವಿಜಯವಾಣಿಯೊಂದಿಗೆ ವಿದ್ಯಾಶಂಕರ್ ಮಾತನಾಡಿ, ಇದು 50 ವರ್ಷಗಳ ಹಿಂದೆ ನಿರ್ಮಿಸಿದ್ದ ಮನೆ. ವಾಸಕ್ಕೆ ಇದೇ ಆಶ್ರಯ. ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆಯಿಂದ ಮನೆಯ ಛಾವಣಿ ಕುಸಿದಿದೆ. ಈಗ ಉಳಿದುಕೊಳ್ಳಲು ಮನೆಯಿಲ್ಲದಂತಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.

ಈ ಬಗ್ಗೆ ಪಿಡಿಒ ಸವಿತಾ ಪ್ರತಿಕ್ರಿಯಿಸಿ, ವಿದ್ಯಾಶಂಕರ್ ಎಂಬುವರ ಮನೆ ಛಾವಣಿ ಕುಸಿದಿರುವ ಹಿನ್ನೆಲೆ ಈಗಾಗಲೆ ಗ್ರಾ.ಪಂ. ಬಿಲ್ ಕಲೆಕ್ಟರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು ಪರಿಹಾರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.