ರೋಣ: ತಾಲೂಕಿನ ಜಿಗಳೂರ ಗ್ರಾಮ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ದರೋಡೆ ಪ್ರಕರಣ ಭೇದಿಸುವಲ್ಲಿ ರೋಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಹನುಮಂತ ತಂಗಳ, ಪರಶು ವೈದ್ಯ ಹಾಗೂ ದುರಗೇ ಕುಂಚಿಕೊರವರ ಎಂಬುವವರನ್ನು ಬಂಧಿಸಿದ್ದು, ಅವರಿಂದ 1.49 ಲಕ್ಷ ರೂಪಾಯಿ ಎರಡು ದ್ವಿಚಕ್ರ ವಾಹನ, ನಗದು ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಘಟನೆ ವಿವರ: ಜಿಗಳೂರು ದೊಡ್ಡ ಕೆರೆ ಹತ್ತಿರ ಬಹಿರ್ದೆಸೆಗೆ ತೆರಳಿದ್ದ ಸಂದರ್ಭದಲ್ಲಿ ಮುಶಿಗೇರಿ ಗ್ರಾಪಂ ಪಿಡಿಒ ದಯಾನಂದ ಜಂಬಗಿ ಅವರನ್ನು ಮೂವರು ದರೋಡೆಕೋರರು ಮಾರಕಾಸ್ತ್ರಗಳಿಂದ ಬೆದರಿಸಿ, 45,280 ರೂ.ಗಳನ್ನು ಯುಪಿಐ ಮೂಲಕ ವರ್ಗಾಯಿಸಿಕೊಂಡು, ಅವರ ದ್ವಿಚಕ್ರ ವಾಹನ ದೋಚಿದ್ದರು. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತರ ವಿರುದ್ಧ ಹುಬ್ಬಳ್ಳಿ ಕೇಶ್ವಾಪುರ ಹಾಗೂ ಕುಷ್ಟಗಿಯ ಪೊಲೀಸ್ ಠಾಣೆಗಳಲ್ಲಿ ಡಕಾಯಿತಿ ಪ್ರಕರಣ ದಾಖಲಾದ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದೆ ಎಂದು ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ ತಿಳಿಸಿದ್ದಾರೆ.
ಸದರಿ ಪ್ರಕರಣ ಭೇದಿಸಲು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹಾಗೂ ಹೆಚ್ಚುವರಿ ಎಸ್ಪಿ ಎಂ.ಬಿ. ಸುಂಕದ, ನರಗುಂದ ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ ಮಾರ್ಗದರ್ಶನದಲ್ಲಿ ರೋಣ ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್ಐ ಪ್ರಕಾಶ ಬಣಕಾರ, ಗಜೇಂದ್ರಗಡ ಠಾಣೆ ಪಿಎಸ್ಐ ಸೋಮನಗೌಡ ಗೌಡರ, ನರೇಗಲ್ ಠಾಣೆ ಪಿಎಸ್ಐ ಐಶ್ವರ್ಯ ನಾಗರಾಳ, ಸಿಬ್ಬಂದಿ ಹನುಮಪ್ಪ ಶಂಕ್ರಿ, ಎಂ.ಬಿ. ವಡ್ಡಟ್ಟಿ, ಮಂಜುನಾಥ ಕುರಿ, ಕುಮಾರ ತಿಗರಿ, ಮಂಜುನಾಥ ಬಂಡಿವಡ್ಡರ, ಶಿವಕುಮಾರ ಹುಬ್ಬಳ್ಳಿ, ಮುತ್ತಪ್ಪ ಭಾವಿ, ಡಿ.ಎಂ. ಚಿತ್ರಗಾರ, ಕಿರಣ ಹಿರೇಮಠ, ಸದಾಶಿವ ಕದಂ, ಹನುಮಂತ ಹುಲ್ಲೂರ ಹಾಗೂ ತಾಂತ್ರಿಕ ವಿಭಾಗದ ಗುರುರಾಜ ಬೂದಿಹಾಳ, ಸಂಜೀವ ಕೊರಡೂರ ಒಳಗೊಂಡ ತಂಡ ರಚಿಸಲಾಗಿತ್ತು.