ಜಿಲ್ಲೆ

ದೇಸಿ ಸಂಸ್ಕೃತಿ ಬೆಳೆಸುವಲ್ಲಿ ಯುವ ಜನರ ಪಾತ್ರ ಮಹತ್ವದ್ದು: ಗವಿಯಪ್ಪ

ಹೊಸಪೇಟೆ: ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಯುವ ಜನತೆಯ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಯುವ ಜನರು ನಾಟಕ, ನೃತ್ಯ, ಜನಪದ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ನೆಹರು ಯುವ ಕೇಂದ್ರ, ಹಂಪಿ ಶ್ರೀ ಸಿದ್ಧರಾಮೇಶ್ವರ ಕಲಾ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಗರದ ಷಾ ಭವರ್ ಲಾಲ್ ಬಾಬುಲಾಲ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇ ತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮಲ್ಲಿರುವ ಸೃಜನಶೀಲ ಪ್ರತಿಭೆ ಅನಾ ವರಣಗೊಳಿಸಬೇಕು. ಸರ್ಕಾರವು ಯುವ ಜನತೆಯ ಸಬಲೀಕರಣಕ್ಕಾಗಿ ವಿವಿಧ ಯೋಜನೆ ಜಾರಿಗೆ ತಂದಿದೆ ಅವುಗಳನ್ನು ಬಳಸಿಕೊಳ್ಳಬೇಕು. ಹಂಪಿಯಲ್ಲಿ ಪ್ರತೀ ವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ನೆಹರು ಯುವ ಕೇಂದ್ರದ ದಕ್ಷಿಣ ವಲಯದ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್ ಮಾತನಾಡಿ, ದೇಶದಲ್ಲಿ ಶೇ.೪೦ ರಷ್ಟು ಯುವಜನರಿದ್ದು, ದೇಶದ ಪ್ರಗತಿಗೆ ಕೈಜೋಡಿಸಬೇಕು. ಸ್ವಾಮಿ ವಿವೇಕಾ ನಂದರ ವಿಚಾರಧಾರೆಗಳಿಂದ ಸ್ಫೂರ್ತಿ ಪಡೆದು ಯುವಜನತೆ ಸಮಾಜದಲ್ಲಿ ಸಾಮರಸ್ಯದಿಂದ ಸಾಗಬೇಕು ಎಂದ ಅವರು, ಯುವ ಜನರಲ್ಲಿರುವ ಪ್ರತಿಭೆ ಗುರುತಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಉತ್ತಮ ಪ್ರದರ್ಶನ ನೀಡಿ, ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.

ಜಿ.ಪಂ. ಸಿಇಒ ಬಿ.ಸದಾಶಿವ ಪ್ರಭು, ನೆಹರು ಯುವ ಕೇಂದ್ರದ ದಕ್ಷಿಣ ವಲಯದ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್, ಎಸ್‌ಬಿಬಿಎನ್ ಕಾಲೇಜಿನ ಅಧ್ಯಕ್ಷ ಕರಿಬಸವರಾಜ ಬದಾಮಿ, ಹಂಪಿ ಸಿದ್ದರಾಮೇಶ್ವರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ವಿರುಪಾಕ್ಷಿ ವಿ.ಹಂಪಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಿಕೇರಿ, ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಮೊಂಟು ಪತ್ತಾರ್, ರಂಜು ಆರ್ಟ್ಸ್ನ ಫಕ್ರುದ್ದೀನ್ ಇದ್ದರು.