ಮೈಸೂರು: ದೇಶವು ಸದೃಢವಾಗಿ ಅಭಿವೃದ್ಧಿ ಹೊಂದಲು ಪೊಲೀಸ್ ಮತ್ತು ಭದ್ರತಾ ಪಡೆಗಳ ಪಾತ್ರ ಪ್ರಮುಖವಾಗಿದೆ ದಕ್ಷಿಣ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕ(ಡಿಐಜಿ) ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿದರು.
ದಕ್ಷಿಣ ವಲಯ ಡಿಐಜಿ, ಮೈಸೂರು ನಗರ, ಜಿಲ್ಲಾ ಪೊಲೀಸ್, ಕರ್ನಾಟಕ ಪೊಲೀಸ್ ಅಕಾಡೆಮಿ, ಕೆಎಸ್‌ಆರ್‌ಪಿ ಮತ್ತು ಕೆಎಆರ್‌ಪಿ ಘಟಕಗಳಿಂದ ನಜರ್‌ಬಾದ್‌ನ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು.
ಪ್ರಕೃತಿ ವಿಕೋಪ ಸೇರಿದಂತೆ ಯಾವುದೇ ಘಟನೆ ಸಂದರ್ಭದಲ್ಲಿ ಮೊದಲು ಸ್ಪಂದಿಸುವವರು ಪೊಲೀಸ್‌ನವರು. ಇಂತಹ ಸಂದರ್ಭದಲ್ಲಿ ತ್ಯಾಗ, ಪ್ರಾಣತ್ಯಾಗವೂ ಅಗಬಹುದು. ಅಂತಹ ಸಂದರ್ಭದಲ್ಲಿ ಬಲಿದಾನ ಮಾಡಿದವರನ್ನು ಸ್ಮರಿಸಲು ಪ್ರತಿವರ್ಷ ಹುತಾತ್ಮರ ದಿನ ಆಚರಿಸಲಾಗುತ್ತಿದೆ ಎಂದರು.
ಕಾನೂನು ಸುವ್ಯವಸ್ಥೆ, ಅಪರಾಧ ಪತ್ತೆ-ನಿಯಂತ್ರಣದ ಜತೆಗೆ ಪೊಲೀಸರು ಭಯೋತ್ಪಾದನೆ, ಸೈಬರ್ ದಾಳಿಯಂತಹ ಹೊಸ ಸವಾಲುಗಳನ್ನು ನಿಭಾಯಿಸಬೇಕಾದ ಜವಾಬ್ದಾರಿ ಇದೆ ಎಂದು ತಿಳಿಸಿದರು.
ದೇಶದೊಳಗೆ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಪತ್ತೆ ಮತ್ತು ನಿಯಂತ್ರಣ ಸೇರಿದಂತೆ ಆಂತರಿಕ ಭದ್ರತೆಯನ್ನು ಪೊಲೀಸ್ ಮತ್ತು ಅರೆಸೇನಾ ಪಡೆಗಳು ಮಾಡುತ್ತಿವೆ ಎಂದರು.
ಯಾವ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿರುತ್ತದೆಯೋ ಆ ದೇಶ ಅಭಿವೃದ್ಧಿ ಹೊಂದಿರುತ್ತದೆ. ನಮ್ಮಲ್ಲರ ಮೇಲೆ ಗುರುತರ ಜವಾಬ್ದಾರಿ ಇದೆ ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಕೆಪಿಎ ಉಪನಿರ್ದೇಶಕ ಚನ್ನಬಸವಣ್ಣ ಲಂಗೋಟಿ, ಕೆಎಸ್‌ಆರ್‌ಪಿ ಕಮಾಂಡೆಂಟ್ ಕೆ.ಬಿ.ದೊರೆಮಣಿ ಭೀಮಯ್ಯ, ಡಿಸಿಪಿಗಳಾದ ಆರ್.ಎನ್.ಬಿಂದುಮಣಿ, ಕೆ.ಎಸ್.ಸುಂದರ್ ರಾಜ್, ಸಿದ್ದನಗೌಡ ಪಾಟೀಲ್, ಹೆಚ್ಚುವರಿ ಎಸ್ಪಿ ಸಿ.ಮಲ್ಲಿಕ್, ಅಶ್ವರೋಹಿ ದಳದ ಕಮಾಂಡೆಂಟ್ ಎ.ಮಾರುತಿ, ಡಿವೈಎಸ್ಪಿ ಗೋಪಾಲಕೃಷ್ಣ ಇತರರು ಇದ್ದರು.
ಪೊಲೀಸ್ ಬ್ಯಾಂಡ್ ವಾದ್ಯದೊಂದಿಗೆ ಸಾಗಿ ಪುಷ್ಪಗುಚ್ಛ ಸಮರ್ಪಿಸಿದರು. ಕರ್ನಾಟಕದ 8 ಮಂದಿ ಸೇರಿದಂತೆ ದೇಶದ ಒಟ್ಟು 191 ಮಂದಿ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಟ್ಟಿಯನ್ನು ಎಸ್ಪಿ ಎನ್.ವಿಷ್ಣುವರ್ಧನ್ ವಾಚಿಸಿದರು. ಪರೇಡ್ ಕಮಾಂಡರ್ ಮಹಾದೇವಸ್ವಾಮಿ ವಂದನೆ ಸಲ್ಲಿಸಿದ ಬಳಿಕ 3 ಸುತ್ತು ವಾಲಿ ಫೈರಿಂಗ್ ನಡೆಸಿ ಹುತಾತ್ಮರಿಗಾಗಿ ಮೌನಾಚರಣೆ ಮಾಡಲಾಯಿತು. ಅಂತಿಮವಾಗಿ ವೀರಪ್ಪನ್ ಕಾರ್ಯಾಚರಣೆಯಲ್ಲಿ ಮಡಿದ ಎಸ್ಪಿ ಹರಿಕೃಷ್ಣ ಪುತ್ಥಳಿ ಹಾಗೂ ಸ್ಮಾರಕಕ್ಕೆ ಪೊಲೀಸ್ ಅಧಿಕಾರಿಗಳು ಮಾಲಾರ್ಪಣೆ ಮಾಡಿದರು.