ಜಿಲ್ಲೆ

ಸೃಷ್ಟಿ ವಿಕಾಸದಲ್ಲಿ ತಾಯಂದಿರ ಪಾತ್ರ ಹಿರಿದು: ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಬಣ್ಣನೆ

ಮೈಸೂರು: ಸೃಷ್ಟಿ ವಿಕಾಸದಲ್ಲಿ ತಾಯಂದಿರ ಪಾತ್ರವೇ ಪ್ರಮುಖವಾಗಿದ್ದು, ಆಕೆಯ ಆದರ್ಶ, ಮಾರ್ಗದರ್ಶನ ಆಧಾರದ ಮೇಲೆ ಸಮಾಜಕ್ಕೆ ಉತ್ತಮ ಕೊಡುಗೆಗಳು ದೊರೆಯುತ್ತಿವೆ ಎಂದು ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಬಣ್ಣಿಸಿದರು.
ಹೆಬ್ಬಾಳದಲ್ಲಿರುವ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖಾ ಮಠದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಹೆಬ್ಬಾಳು-ವಿಜಯನಗರ ಭೈರವಿ ಗೌಡ್ತಿಯರ ಬಳಗದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ತಾಯಂದಿರು ಮನಸು ಮಾಡಿದರೆ ಪಾಂಡವರು ಹುಟ್ಟುತ್ತಾರೆ, ಗಾಂಧೀಜಿಯಂತವರು ಹುಟ್ಟುತ್ತಾರೆ, ನನ್ನಂತಹ ಸನ್ಯಾಸಿ ಹುಟ್ಟುತ್ತಾರೆ, ರಾವಣನೂ ಹುಟ್ಟುತ್ತಾನೆ, ದುರ್ಯೋಧನ ಕೂಡ ಹುಟ್ಟುತ್ತಾನೆ. ಹಾಗಾಗಿ ತಾಯಂದಿರ ಕೊಡುಗೆ ಅಪಾರ ಎಂದು ಹೇಳಿದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀಸೋಮೇಶ್ವರನಾಥ ಸ್ವಾಮೀಜಿ ಇದ್ದರು. ಹೆಬ್ಬಾಳು-ವಿಜಯನಗರ ಭೈರವಿ ಗೌಡ್ತೀಯರ ಬಳಗದ ಅಧ್ಯಕ್ಷರಾದ ಪ್ರೇಮಾ ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು.
ಮುಡಾ ಮಾಜಿ ಅಧ್ಯಕ್ಷ ಡಿ.ಮಾದೇಗೌಡ, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಶ್ರೀಧರ್, ಭೈರವಿ ಗೌಡ್ತೀಯರ ಬಳಗದ ಪದಾಧಿಕಾರಿಗಳಾದ ಹೇಮಾ ನಂದೀಶ್, ಕೋಮಲಾ ವೆಂಕಟೇಶ್, ರಾಧಾ ಜಯರಾಮ, ಬಿ.ಸಿ.ರೇಣುಕಾ ಜಗದೀಶ್, ಸುಶೀಲಾ ಬಸವರಾಜು, ಉಮಾ ನಾಗೇಶ್, ರಾಧಾ ಲಂಕೇಗೌಡ, ರೇವತಿ ಕೃಷ್ಣಪ್ಪ ಇತರರು ಇದ್ದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ:
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವೆ ವಿ.ಆರ್.ಶೈಲಜಾ, ಸೆಂಟ್ರಲ್ ಟ್ಯಾಕ್ಸೃ್ ಅಧೀಕ್ಷಕರಾದ ಲಕ್ಷ್ಮೀ ಪಿ.ಗೌಡ, ರಾಜ್ಯ ಮಟ್ಟದ ಕ್ರೀಡಾಪಟು ಅನಸೂಯಾ ವಿಜಯರಾಮೇಗೌಡ, ಎಲ್ಐಸಿ ಆಫ್ ಇಂಡಿಯಾ ಗೆಲಾಕ್ಸಿ ಮೆಂಬರ್ ಶೋಭಾ ಮಂಜುನಾಥ್ ಹಾಗೂ ಅಂತಾರಾಷ್ಟ್ರೀಯ ಯೋಗಪಟು ಖುಷಿ ಅವರನ್ನು ಸನ್ಮಾನಿಸಲಾಯಿತು.