ಜಿಲ್ಲೆ

ಮಹಿಳೆಯರ ಪ್ರಗತಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಕೊಡುಗೆ ಅಪಾರ

ಅರಸೀಕೆರೆ ಗ್ರಾಮಾಂತರ: ಮಹಿಳೆಯರು ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಪಡೆದು ಉತ್ತಮ ಜೀವನ ಸಾಗಿಸಬಹುದು ಎಂದು ಕೆನರಾ ಬ್ಯಾಂಕ್‌ಮನ ಉಪ ಪ್ರಧಾನ ವ್ಯವಸ್ಥಾಪಕ ಶೈಲೇಂದ್ರನಾಥ್ ತಿಳಿಸಿದರು.


ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಶ್ರೀ ಸ್ವರ್ಣಗೌರಿ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಶಿವಾಳ ದೊಡ್ಡಮೇಟಿಕುರ್ಕೆ ಕೆನರಾ ಬ್ಯಾಂಕ್, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ಮೇಳ ಕಾರ್ಯಕ್ರಮ ಮತ್ತು ಮಹಿಳಾ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರ ಪ್ರಾದೇಶಿಕ ಕಚೇರಿ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಆರ್ಥಿಕ ಪ್ರಗತಿ ಸುಧಾರಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳ ಪಾತ್ರ ಬಹುಮುಖ್ಯ. ಸ್ವ-ಸಹಾಯ ಗುಂಪುಗಳ ಮುಖಾಂತರ ಮಹಿಳೆಯರು ಸಾಲ ಸೌಲಭ್ಯ ಪಡೆದು ಜೀವನ ಸುಧಾರಿಸಿಕೊಳ್ಳಬಹುದು ಎಂದರು.


ಶಶಿವಾಳ ಶಾಖೆ ವ್ಯವಸ್ಥಾಪಕಿ ರೇಷ್ಮಾ ಬಾನು ಮಾತನಾಡಿ, ನಮ್ಮ ಶಾಖೆ ಮತ್ತು ದೊಡ್ಡಮೇಟಿಕುರ್ಕೆ ಶಾಖೆಯಿಂದ ಒಟ್ಟು ನಲವತ್ತು ಸ್ವ ಸಹಯ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸಿದ್ದೇವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ವೈ.ಎ.ಅಂತೋನಿ ರಾಜ್, ಅಕಾಂಶ ಫೈನಾನ್ಸ್ ಸರ್ವೀಸಸ್‌ನ ನಿರ್ದೇಶಕ ಜಯಚಂದ್ರ, ಶಶಿವಾಳ ಮತ್ತು ಡಿ.ಎಂ.ಕುರ್ಕೆ ಶಾಖೆ ವ್ಯವಸ್ಥಾಪಕ ಅಬ್ದುಲ್ ಅಜೀದ್, ಶಾಖೆಯ (ಕ್ಷೇತ್ರ)ವಲಯ ಅಧಿಕಾರಿ ವಿಶ್ವನಾಥ್, ಗೋವಿಂದರಾಜು, ಮಧು, ಅಭಿಷೇಕ್ ಶಿವ, ಚಂದ್ರಪ್ಪ ಇತರರು ಹಾಜರಿದ್ದರು.