ಜಿಲ್ಲೆ

ರಕ್ತಹೀನತೆಮುಕ್ತ ರಾಜ್ಯಕ್ಕೆ ಪ್ರಾಜೆಕ್ಟ್ ಚಂದನ

ಅವಿನಾಶ್ ಜೈನಹಳ್ಳಿ

ಮೈಸೂರು: ಉತ್ತಮ ಆರೋಗ್ಯ ಸೇವೆಗಳನ್ನು ನೀಡುವುದು ಹಾಗೂ ರಾಜ್ಯವನ್ನು ಅನೀಮಿಯಾಮುಕ್ತ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಹಯೋಗದಲ್ಲಿ ರೂಪಿಸಿರುವ ಪ್ರಾಜೆಕ್ಟ್ ಚಂದನವನ್ನು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 2 ವರ್ಷ ಅವಧಿಗೆ ಜಾರಿಗೊಳಿಸಲಾಗುತ್ತಿದೆ. ಸಿಕಲ್ ಸೆಲ್ ಅನೀಮಿಯಾ ರೋಗದ ಪತ್ತೆ, ಜಾಗೃತಿ ಹಾಗೂ ಚಿಕಿತ್ಸೆ ನೀಡುವುದು ಯೋಜನೆ ಗುರಿಯಾಗಿದೆ. ಸರಳವಾಗಿ ಸಿಕಲ್ ಸೆಲ್ ಅನೀಮಿಯಾ ಕಂಡು ಹಿಡಿಯುವ ಸಾಧನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಯುವ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ಈ ಸಾಧನಗಳನ್ನು ಕೊಡುಗೆಯಾಗಿ ನೀಡುತ್ತಿದೆ ಎಂದರು.

7 ಜಿಲ್ಲೆಗಳಲ್ಲಿ ಸಿಕಲ್ ಸೆಲ್ ಅನೀಮಿಯಾ ಪರೀಕ್ಷೆ ಮಾಡಿದ್ದು, ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಿಕಲ್ ಸೆಲ್ ಅನೀಮಿಯಾ ಕಂಡುಬಂದಿದೆ. ಸಿಕಲ್ ಸೆಲ್ ಅನೀಮಿಯಾ ಒಂದು ಅನುವಂಶೀಯ ಕಾಯಿಲೆ ಆಗಿದ್ದು, ಈ ಸಮಸ್ಯೆ ಇರುವವರನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಪ್ರಾಜೆಕ್ಟ್ ಚಂದನದಡಿ ಮುಂದಿನ 2 ವರ್ಷಗಳಲ್ಲಿ 2.56 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಿ ಸಿಕಲ್ ಸೆಲ್ ಅನೀಮಿಯಾ ಇರುವವರನ್ನು ಗುರುತಿಸಿ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.


ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಚಾಮರಾಜನಗರ, ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸಿಕಲ್ ಸೆಲ್ ಅನೀಮಿಯಾ ಕಂಡುಬಂದಿದೆ. ಇದನ್ನು ನಿರ್ಮೂಲನೆ ಮಾಡಲು ಹೆಚ್ಚಾಗಿ ಪರೀಕ್ಷೆಗಳನ್ನು ಮಾಡಿ ಚಿಕಿತ್ಸೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ನನ್ನ ಕಡೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಬುಡಕಟ್ಟು ಜನಾಂಗದಲ್ಲಿ ಹೆಚ್ಚಾಗಿ ಸಿಕಲ್ ಸೆಲ್ ಅನೀಮಿಯಾ ಕಂಡುಬರುತ್ತಿದೆ. ಅರಣ್ಯ ಪ್ರದೇಶದ ಹಾಡಿಗಳಲ್ಲಿ ವಾಸಿಸುತ್ತಿರುವರಲ್ಲಿ ಮಲೇರಿಯಾ, ಚಿಕೂನ್ ಗುನ್ಯಾ ಹೆಚ್ಚಾಗಿ ಕಂಡುಬರುತ್ತದೆ. ಬುಡಕಟ್ಟು ಜನಾಂಗದಲ್ಲಿ ವಾಸಿಸುತ್ತಿರುವ ಜನರು ಮದುವೆ ಆಗುವಾಗ ಜೆನೆಟಿಕ್ ಟೆಸ್ಟ್ ಮಾಡಿಸಿ ಮದುವೆ ಆಗುವುದು ಉತ್ತಮ. ಸಿಕಲ್ ಸೆಲ್ ಅನೀಮಿಯಾ ಇರುವವರು ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು ಎಂದರು.


ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಜಿಲ್ಲಾ ಆಸ್ಪತ್ರೆ ಉತ್ತಮ ಮಟ್ಟದ ಚಿಕಿತ್ಸೆ ನೀಡುತ್ತಿದೆ. ಒಂದು ವರ್ಷದ ಹಿಂದೆ ಜಿಲ್ಲಾ ಆಸ್ಪತ್ರೆಯಲ್ಲಿ ಮಾಸಿಕ 30 ರಿಂದ 40 ಹೆರಿಗೆಗಳು ಆಗುತ್ತಿದ್ದವು. ಉತ್ತಮ ಸೌಲಭ್ಯಗಳನ್ನು ಮಾನ್ಯ ಸಚಿವರು ಒದಗಿಸಿದ್ದರಿಂದ ಈಗ ಮಾಸಿಕ 250ರವರೆಗೆ ಹೆರಿಗೆಗಳು ಆಗುತ್ತಿವೆ. ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನೆ ಮಾಡಲು ಎಲ್ಲರೂ ಸಹಕರಿಸಿ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಭಿಯಾನದ ನಿರ್ದೇಶಕ ಡಾ.ನವೀನ್ ಭಟ್ ಮಾತನಾಡಿ, ಸಿಕಲ್ ಸೆಲ್ ಅನೀಮಿಯಾ ಒಂದು ಅನುವಂಶೀಯ ರಕ್ತ ಕಣದ ಕಾಯಿಲೆ ಆಗಿರುತ್ತದೆ. ಇದು ಹಾಡಿ ಜನಾಂಗ ಹಾಗೂ ಬುಡಕಟ್ಟು ಜನಾಂಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 57 ಸಾವಿರಕ್ಕೂ ಹೆಚ್ಚು ಜನರ ರಕ್ತ ಪರೀಕ್ಷೆ ಮಾಡಿದ್ದು 2018 ಜನರಲ್ಲಿ ಸಿಕಲ್ ಸೆಲ್ ಅನೀಮಿಯಾ ಕಂಡುಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 2047 ರೊಳಗೆ ಈ ಕಾಯಿಲೆಯನ್ನು ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಸಿಕಲ್ ಸೆಲ್ ಅನೀಮಿಯಾ ಕಾಯಿಲೆಗೆ ತುತ್ತಾಗಿರುವ ಮಕ್ಕಳಿಗೆ ಜೆನೆಟಿಕ್ಸ್ ಕಾರ್ಡ್‌ಗಳಳನ್ನು ವಿತರಣೆ ಮಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ, ಯುವ ವಿಜ್ಞಾನಿ ಸಾಯಿ ಶಿವ ಇತರರಿದ್ದರು.