ಜಿಲ್ಲೆ

ರಣಜಿ ತಂಡಕ್ಕೆ ಎಡಗೈ ಸ್ಪಿನ್ ಮಾಂತ್ರಿಕ ರೋಹಿತ್

ಮರಿದೇವ ಹೂಗಾರ

ಹುಬ್ಬಳ್ಳಿ: ರಾಣೆಬೆನ್ನೂರು ಮೂಲದ ಇಲ್ಲಿಯ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್​ನ ಎಡಗೈ ಸ್ಪಿನ್ ಮಾಂತ್ರಿಕ ರೋಹಿತ್ ಕುಮಾರ ಎ.ಸಿ., ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

8 ವರ್ಷದಿಂದಲೂ ಇದೇ ಕ್ಲಬ್​ನಲ್ಲಿ ತರಬೇತಿ ಪಡೆಯುತ್ತಿದ್ದ ರೋಹಿತ್, 19, 23,25 ವರ್ಷದೊಳಗಿನ ತಂಡದಲ್ಲಿ ಆಟವಾಡಿ ಗಮನ ಸೆಳೆದಿದ್ದರು. 15ನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಆಸಕ್ತಿ ಬೆಳೆಸಿಕೊಂಡಿದ್ದರು.

ಧಾರವಾಡ ಜೋನಲ್​ನಲ್ಲಿ ಗೆದ್ದು ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದರು. ಸ್ಪಿನ್ ಮೋಡಿ ಮೂಲಕ ವಿಕೆಟ್​ಗಳನ್ನು ಧರೆಗುರುಳಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವವಿವರು, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮಾಡುವುದರಲ್ಲೂ ಎತ್ತಿದ ಕೈ. ಈ ಪ್ರತಿಭೆ ರಣಜಿ ತಂಡಕ್ಕೆ ಆಯ್ಕೆಯಾಗಿರುವುದು ರಾಜ್ಯದ ಕ್ರಿಕೆಟ್ ಪ್ರೇಮಿಗಳಲ್ಲಿ ಮತ್ತಷ್ಟು ವಿಶ್ವಾಸ ಹೆಚ್ಚಿಸಿದೆ.

ಕ್ಲಬ್ ಅಧ್ಯಕ್ಷ ವೀರಣ್ಣ ಸವಡಿ ಮಾತನಾಡಿ, ‘ಕರ್ನಾಟಕ ರಣಜಿ ತಂಡಕ್ಕೆ ನಮ್ಮ ಕ್ಲಬ್​ನಲ್ಲಿ ತರಬೇತಿ ಪಡೆದಿದ್ದ ರೋಹಿತ್ ಆಯ್ಕೆಯಾಗಿರುವುದು ಖುಷಿ ತಂದಿದೆ. ಈತನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ’ ಎಂದರು.

‘ವಿಜಯವಾಣಿ’ಯೊಂದಿಗೆ ಮಾತನಾಡಿದ ರೋಹಿತ್​ಕುಮಾರ, ಇದು ನನಗೆ ಸಿಕ್ಕ ಬಹುದೊಡ್ಡ ವೇದಿಕೆ. ಮುಂದೊಂದು ದಿನ ಭಾರತ ತಂಡದಲ್ಲಿ ಆಟವಾಡುವ ವಿಶ್ವಾಸವಿದೆ ಎಂದರು.