ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಟುಂಬಸ್ಥರು 
ಜಿಲ್ಲೆ

ತವರೂರಲ್ಲಿ ರೋಹನ್ ಬೋಪಣ್ಣಗೆ ಅದ್ದೂರಿ ಸನ್ಮಾನ

ಗೋಣಿಕೊಪ್ಪಲು: ಟೆನಿಸ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿ ನಂ.1 ಆಟಗಾರನಾಗಿ ಸಾಧನೆ ಮಾಡಿರುವ ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಗೂ ಕೊಡಗಿನ ಕುವರ ಮಚ್ಚಂಡ ರೋಹನ್ ಬೋಪಣ್ಣ ಅವರ ಸಾಧನೆಯನ್ನು ಗುರುತಿಸಿ ಶುಕ್ರವಾರ ತವರು ಕ್ಷೇತ್ರದಲ್ಲಿ ಕೊಡವ ಸಾಂಪ್ರದಾಯಿಕ ಬೆಳ್ಳಿಯ ಗೆಜ್ಜೆ ತಂಡ್ ನೀಡುವ ಮೂಲಕ ಕುಟುಂಬಸ್ಥರು ಗೌರವಿಸಿ ಸನ್ಮಾನಿಸಿದರು.

ಗೋಣಿಕೊಪ್ಪಲುವಿನ ಪ್ಲಾಂಟರ್ಸ್‌ ಕ್ಲಬ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಚ್ಚಂಡ, ಕೊಂಗಂಡ, ಬೊಟ್ಟಂಗಡ ಹಾಗೂ ಮೂಡೇರ ಕುಟುಂಬಸ್ಥರ ಮಕ್ಕಳು ಹಾಗೂ ಮೊಮ್ಮಕ್ಕಳು ಒಟ್ಟಾಗಿ ಸೇರಿ ಕೊಡಗಿನ ಮಚ್ಚಂಡ ರೋಹನ್ ಬೋಪಣ್ಣನವರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಚ್ಚಂಡ ರೋಹನ್ ಬೋಪಣ್ಣ, ತವರೂರಿನಲ್ಲಿ ಕುಟುಂಬಸ್ಥರು ನೀಡುವ ಗೌರವ ಬೇರೆ ಎಲ್ಲಿ ಸಿಕ್ಕರೂ ಸಂತೃಪ್ತಿಯಾಗುವುದಿಲ್ಲ. ಇಂದು ಕುಟುಂಬಸ್ಥರು ನೀಡಿರುವ ಗೌರವವನ್ನು ಸದಾ ಸ್ಮರಿಸುತ್ತೇನೆ. ಕ್ರೀಡೆಯಲ್ಲಿ ಕಠಿಣ ಪರಿಶ್ರಮ ಅಗತ್ಯ. ಕ್ರೀಡೆಗಾಗಿ ಎಲ್ಲವನ್ನು ತ್ಯಾಗ ಮಾಡಬೇಕಾಗಿದೆ. ಇದರಿಂದ ಉತ್ತಮ ಸಾಧನೆ ಮಾಡಬಹುದು. ಇದಕ್ಕೆ ನಾನೇ ಸ್ಪಷ್ಟ ಉದಾಹರಣೆ. ಕಠಿಣ ಪರಿಶ್ರಮದಿಂದ ಇಂದು ಉತ್ತಮ ಟೆನಿಸ್‌ಪಟುವಾಗಿದ್ದೇನೆ. ಕೊಡಗಿನ ಮಣ್ಣಿನಲ್ಲಿ ಹುಟ್ಟಿದ ನನಗೆ ಇಂತಹ ಸಾಧನೆ ಮಾಡಲು ಭಗವಂತನ ಹಾಗೂ ಕುಟುಂಬಸ್ಥರ ಆರ್ಶೀವಾದವೇ ಪ್ರಮುಖ ಕಾರಣ. ತಮ್ಮ ಮಕ್ಕಳನ್ನು ವಿವಿಧ ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಇದರಿಂದ ಅವರಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಕೂಡ ಯುವ ಪೀಳಿಗೆಗೆ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.

ಹಿರಿಯರಾದ ಬೊಟ್ಟಂಗಡ ಜಯ ಮಾತನಾಡಿ, ಕೊಡಗಿನಿಂದ ತೆರಳಿದ ಯುವಕ ಇಂದು ಪ್ರಪಂಚದಲ್ಲಿಯೆ ಟೆನಿಸ್ ತಾರೆಯಾಗಿ ಮಿನುಗುತ್ತಿದ್ದಾರೆ. ಇದರಿಂದ ಪ್ರತಿ ಕುಟುಂಬಕ್ಕೂ ಹಾಗೂ ಕೊಡಗಿಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆ ಯುವ ಪ್ರತಿಭೆಗಳಿಗೆ ಪೂರಕವಾದ ಬೆಂಬಲ ಸಿಕ್ಕಿದಂತಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾಪಟುವನ್ನು ಕುಟುಂಬದ ವತಿಯಿಂದ ಗೌರವಿಸಲಾಗುತ್ತಿದೆ ಎಂದರು.

ರೋಹನ್ ಬೋಪಣ್ಣ ಪತ್ನಿ ಸುಪ್ರಿಯಾ, ಹಿರಿಯರಾದ ಕೊಂಗಂಡ ಮೀನಾಕ್ಷಿ, ಬೊಟ್ಟಂಗಡ ಪ್ರಕಾಶ್, ನಿತಿನ್, ಕೊಂಗಂಡ ಬೋಪಣ್ಣ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು. ಮಚ್ಚಂಡ, ಕೊಂಗಂಡ, ಬೊಟ್ಟಂಗಡ ಹಾಗೂ ಮೂಡೇರ ಕುಟುಂಬಸ್ಥರ ಹಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.