ಜಿಲ್ಲೆ

ರೋಬಸ್ಟಾ ಧೂಳೆಬ್ಬಿಸಿದ ಕಾರುಗಳು

ಮಾದೇಶ್ ತಿ.ನರಸೀಪುರ

ಸಿದ್ದಾಪುರ: ರೋಬಸ್ಟಾ 2024ರ ರ‌್ಯಾಲಿಯ ಅಂತಿಮ 5ನೇ ಸುತ್ತಿನ ಗುರಿ ಮುಟ್ಟಲು 61 ಕಾರುಗಳ ಪೈಕಿ 57 ಕಾರುಗಳು ವಿರಾಜಪೇಟೆ ತಾಲೂಕಿನ ಹೊಸಳ್ಳಿ, ಮಾರ್ಗೋಳ್ಳಿ ಮಾರ್ಗವಾಗಿ ಕಾಫಿ ತೋಟಗಳ ಮಧ್ಯೆ ಕಡಿದಾದ ರಸ್ತೆಯಲ್ಲಿ ಧೂಳೆಬ್ಬಿಸಿ ಮುನ್ನುಗ್ಗುತ್ತಿದ್ದ ಕಾರುಗಳು ನೋಡುಗರಲ್ಲಿ ರೋಮಾಂಚನ ಮೂಡಿಸಿತು.

ಬ್ಲೂ ಬ್ಯಾಂಡ್, ಎಫ್‌ಎಂಎಸ್‌ಸಿಐ, ಇಂಡಿಯನ್ ನ್ಯಾಷನಲ್ ರ‌್ಯಾಲಿ ಚಾಂಪಿಯನ್‌ಷಿಪ್ ನೇತೃತ್ವದಲ್ಲಿ ರೋಬಸ್ಟಾ ಸ್ಪೋರ್ಟ್ಸ್ ಆ್ಯಂಡ್ ಅಡ್ವೆಂಚರ್ ಅಕಾಡೆಮಿ ಸಹಕಾರದಲ್ಲಿ ಆಯೋಜಿಸಿರುವ ರ‌್ಯಾಲಿಗೆ ಕೊಡಗು ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಕಾರ್ಮಿಕರು, ಸ್ಥಳೀಯ ನಿವಾಸಿಗಳು, ಕಾರುಗಳು ತೆರಳುವ ಮಾರ್ಗದುದ್ದಕ್ಕೂ ಜಮಾಯಿಸಿ ಸ್ಪರ್ಧಿಗಳನ್ನು ಹುರಿದುಂಬಿಸಿ, ಸಿಳ್ಳೆ ಚಪ್ಪಾಳೆ, ತಟ್ಟಿ ಪ್ರೋತ್ಸಾಹಿಸಿದರು.

ಅತಿ ವೇಗದ ಚಾಲನೆ ಸಂದರ್ಭ ಜಿಪ್ಸಿ ಸೇರಿದಂತೆ ಕೆಲ ಕಾರುಗಳು ಸ್ಪರ್ಧಾಳುಗಳ ನಿಯಂತ್ರಣ ತಪ್ಪಿ, ಉರುಳಿ ಬಿದ್ದವು. ಮಾರ್ಗ ಮಧ್ಯ ಇದ್ದ ಕಾರ್ಮಿಕರು ತಕ್ಷಣ ಕಾರುಗಳನ್ನು ಮೇಲೆತ್ತಿ ಮತ್ತೆ ಸಂಚರಿಸಲು ಅನುವು ಮಾಡಿಕೊಟ್ಟರು.

ಎಲ್ಲ ಕಾರುಗಳಲ್ಲೂ ಜಿಪಿಎಸ್ ಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿತ್ತು. ಬೇರೆ ದೇಶಗಳಲ್ಲಿ ನಡೆಯುವ ಕಾರು ರ‌್ಯಾಲಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದ ಕಾರ್ಮಿಕರು ಹಾಗೂ ಸ್ಥಳೀಯರಿಗೆ ಕಣ್ಣೆದುರಲ್ಲೇ ಎದೆ ಜಲ್ಲೆನಿಸುವ ರೀತಿಯಲ್ಲಿ ಕಾರುಗಳು ಒಂದಕ್ಕೊಂದು ತಮ್ಮ ವೇಗ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಭಾರಿ ಶಬ್ದದೊಂದಿಗೆ ನುಗ್ಗುತ್ತಿರುವುದನ್ನು ಕಂಡು ಖುಷಿ ಪಟ್ಟು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡರು.

ಅಮ್ಮತ್ತಿ, ಪಾಲಿಬೆಟ್ಟ, ಸಿದ್ದಾಪುರ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳು ಅಧಿಕವಾಗಿತ್ತು, ಅಲ್ಲಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾಡು ಪ್ರಾಣಿಗಳ ಮೇಲೆ ನಿಗಾ ವಹಿಸಿದ್ದರು. ಟಾಟಾ ಕಾಫಿ ಸಂಸ್ಥೆಯ ಕಾಫಿ ತೋಟಗಳಲ್ಲಿ ಮಾರ್ಗದ ಉದ್ದಕ್ಕೂ ಸಂಚಾರಕ್ಕೆ ಯಾವುದೇ ತೊಡಕು ಉಂಟಾಗದಂತೆ ಸಿಬ್ಬಂದಿ ನಿಯೋಜಿಸಿ ನಿಯಂತ್ರಣ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.

ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ, ಪಾಂಡಿ, ಗೋವಾ, ಪೂನಾ, ಚಂಡೀಗಢ, ಕೋಲ್ಕತ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 61 ಕಾರುಗಳ ನೂರಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ರ‌್ಯಾಲಿಯಲ್ಲಿ ಭಾಗವಹಿಸಿದ್ದರು.