ಜಿಲ್ಲೆ

ಬೋಧನೆ ಮಾಡಲು ಮೈಸೂರಿಗೆ ಬಂದ ರೋಬಾಟ್!; ಶಾಂತಲಾ ವಿದ್ಯಾಪೀಠದಲ್ಲಿ ಲ್ಯಾಬ್ ನಿರ್ಮಾಣ

Webdesk - Ravikanth

ವಿಜಯವಾಣಿ ವಿಶೇಷ ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ಹೋಟೆಲ್​ಗೆ ಸರ್ವರ್ ಆಗಿ ರೋಬಾಟ್ ಮಹಿಳೆ ಬಂದ ಬೆನ್ನಲ್ಲೇ ಇದೀಗ ಬೋಧನೆ ಮಾಡಲು ಶಿಕ್ಷಕ ರೋಬಾಟ್ ಬಂದಿದೆ. ಶಿಕ್ಷಕರು ಮಾಡುವ ಪಾಠದಂತೆಯೇ ರೋಬಾಟ್ ಪಾಠ ಮಕ್ಕಳನ್ನು ಆರ್ಷಿಸುತ್ತಿದೆ. ನಗರದ ಶಾಂತಲಾ ವಿದ್ಯಾಪೀಠದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸುವ ರೋಬಾಟ್ ಲ್ಯಾಬ್ ನಿರ್ವಣಗೊಂಡಿದ್ದು, ಮಕ್ಕಳ ಆಸಕ್ತಿ, ಕುತೂಹಲವನ್ನು ಕೆರಳಿಸಿದೆ. ಕೇಂದ್ರೀಯ ಪಠ್ಯಕ್ರಮ ಬೋಧಿಸುವ ಸಂಸ್ಥೆಯಲ್ಲಿ ಎಲ್​ಕೆಜಿಯಿಂದ ಹತ್ತನೇ ತರಗತಿವರೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅವರ ತರಗತಿಗೆ ಅನುಗುಣವಾಗಿ ರೋಬಾಟ್​ಗೆ ಕಾರ್ಯಕ್ರಮ ರೂಪಿಸಲಾಗಿದೆ.

ಎಲ್​ಕೆಜಿಯಿಂದ ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹಾಡು, ಕತೆ, ಮನರಂಜನೆ ಮೂಲಕ ಅಕ್ಷರಾಭ್ಯಾಸ, ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗಿದೆ. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ತಕ್ಕಂತೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಪ್ರೌಢಶಾಲೆ ವಿದ್ಯಾರ್ಥಿಗಳ ಭೌತಿಕ ಮಟ್ಟಕ್ಕೆ ತಕ್ಕಂತೆ ಬೋಧನೆ ಜತೆಗೆ ನಾನಾ ಬಗೆಯ ಪ್ರಾಯೋಗಿಕ ಚಟುವಟಿಕೆಗಳನ್ನು ಚಿತ್ರ ಸಹಿತ ವಿವರಿಸಿ ಅವುಗಳನ್ನು ವಿದ್ಯಾರ್ಥಿಗಳೇ ಮಾಡಲು ಪ್ರೇರೇಪಿಸುತ್ತದೆ. ರೋಬಾಟ್ ಹೇಳಿಕೊಡುವ ಪ್ರಯೋಗಗಳನ್ನು (ಪ್ರಾಜೆಕ್ಟ್) ಮಾಡಲು ಅದಕ್ಕಾಗಿಯೇ ಪ್ರತ್ಯೇಕವಾಗಿ ಪ್ಲಾಸ್ಟಿಕ್ ಕಚ್ಚಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಹೀಗಾಗಿ, ಒಂದೆರಡು ದಿನಗಳಲ್ಲಿಯೇ ರೋಬಾಟ್ ಪಾಠ ಕೇಳಿದ ವಿದ್ಯಾರ್ಥಿಗಳು ಹತ್ತಾರು ಪ್ರಾಜೆಕ್ಟ್​ಗಳನ್ನು ಸಿದ್ಧಪಡಿಸಿದ್ದಾರೆ.

ರೋಬಾಟ್ ಮುಖದಲ್ಲಿ ಅಳವಡಿಸಿರುವ 86 ಸೆಂ.ಮೀ. ಅಳತೆಯ ಟಚ್ ಸ್ಕ್ರೀನ್ ಮಾನಿಟರ್​ನಲ್ಲಿ ಮೂಡಿಬರುವ ಚಿತ್ರಗಳು, ಮುಖಭಾವವನ್ನು ತೋರಿಸುವುದಲ್ಲದೆ ಮಾತು, ಹಾಡಿಗೆ ತಕ್ಕಂತೆ ಕೈಗಳನ್ನು ಚಲಿಸುವುದರಿಂದ ಶಿಕ್ಷಕರೇ ನಮ್ಮ ಮುಂದೆ ನಿಂತು ಮಾತನಾಡುತ್ತಿದ್ದಾರೆ ಎನ್ನುವ ಭಾವನೆಯನ್ನು ಮಕ್ಕಳಲ್ಲಿ ಮೂಡಿಸುತ್ತದೆ. ಅಲ್ಲದೆ, ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೂ ಪ್ರತ್ಯುತ್ತರ ನೀಡುವ ಈ ಎಜುಕೇಷನ್ ರೋಬಾಟ್ ಗಮನ ಸೆಳೆಯುತ್ತಿದೆ. ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳ ಜತೆಗೆ, ಹಿಂದುಳಿದ ವಿದ್ಯಾರ್ಥಿಗಳಿಗೂ ಈ ರೋಬಾಟ್ ಪಾಠ ಅವರ ಕೌಶಲ, ಕಲಿಕಾ ಮಟ್ಟವನ್ನು ಹೆಚ್ಚಿಸಲು ನೆರವಾಗಿದೆ. ರೋಬಾಟ್ ಲ್ಯಾಬ್ ಕಲಿಕೆಗಾಗಿ ಒಂದೊಂದು ತರಗತಿಗೆ 45 ನಿಮಿಷಗಳನ್ನು ಮೀಸಲಿಡಲಾಗಿದೆ. ಕೊಠಡಿಯಲ್ಲಿಯೇ ಪ್ರತ್ಯೇಕ ಜಾಗ ಬಿಟ್ಟು ಪ್ರತಿಯೊಬ್ಬರೂ ಪ್ರಾಜೆಕ್ಟ್​ನಲ್ಲಿ ಭಾಗವಹಿಸಲು ಪ್ರೇರೇಪಿಸಲಾಗುತ್ತಿದೆ. ರೋಬಾಟ್ ಪಾಠ ಮಾಡುವಾಗ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲು, ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಶಿಕ್ಷಕರೊಬ್ಬರನ್ನು ನಿಯೋಜಿಸಲಾಗುತ್ತಿದೆ. ಹೀಗಾಗಿ, ಪ್ರತಿ ವಿದ್ಯಾರ್ಥಿ ಪ್ರಾಜೆಕ್ಟ್​ನಲ್ಲಿ ಭಾಗವಹಿಸುವ ಮೂಲಕ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಲಾಗುತ್ತಿದೆ.

ಎರಡು ರೋಬಾಟ್​ನಿಂದ ಪಾಠ: ಶಾಲೆಯಲ್ಲಿ ಎರಡು ರೋಬಾಟ್​ಗಳು ಬೋಧನೆ ಮಾಡುತ್ತಿವೆ. ಜಪಾನ್​ನಿಂದ ರೋಬಾಟ್​ಗಳನ್ನು ತರಿಸಲಾಗಿದ್ದು, ಮಧ್ಯಪ್ರದೇಶದ ಕಂಪನಿಯ ಅಮಿತ್, ರಾಹುಲ್ ಇನ್ನಿತರರ ಯುವ ತಂಡ ಕಾರ್ಯಕ್ರಮ ಅಳವಡಿಕೆ, ನಿರ್ವಹಣೆ ಜವಾಬ್ದಾರಿ ಹೊತ್ತಿದೆ. ಅಲ್ಲದೆ, ಪ್ರಾಜೆಕ್ಟ್​ಗೆ ಬೇಕಾದ ಮುರಿಯದ, ವಿದ್ಯಾರ್ಥಿಗಳಿಗೆ ಅಪಾಯವಿಲ್ಲದ ಪ್ಲಾಸ್ಟಿಕ್ ಕಚ್ಚಾ ಉಪಕರಣಗಳನ್ನು ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ.

ನನ್ನ ತಂದೆ ಶ್ರೀಕಾಂತ್ ಅವರು 1970ರಲ್ಲಿ ಸ್ಥಾಪಿಸಿದ ಶಾಂತಲಾ ವಿದ್ಯಾಪೀಠ ಹೊಸತನ, ತಂತ್ರಜ್ಞಾನ ಅಳವಡಿಸಿಕೊಳ್ಳುತ್ತ ಬಂದಿದೆ. ಸರ್ಕಾರಿ ಆದೇಶ ಬರುವ ಮುನ್ನವೇ ಹತ್ತು ವರ್ಷಗಳ ಹಿಂದೆಯೇ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ವಸ್ತುಪ್ರದರ್ಶನಕ್ಕೆಂದು ಬೆಂಗಳೂರಿಗೆ ಹೋಗಿದ್ದಾಗ ಎಜುಕೇಷನ್ ರೋಬಾಟ್ ನೋಡಿ, ಇದು ಮಕ್ಕಳಿಗೆ ಬೇಕೆಂದು ಮಧ್ಯಪ್ರದೇಶದ ಕಂಪನಿಯೊಂದಿಗೆ ಮಾತುಕತೆ ನಡೆಸಿ 15 ಲಕ್ಷ ರೂ. ವೆಚ್ಚದಲ್ಲಿ ಈ ರೋಬಾಟ್ ಲ್ಯಾಬ್ ನಿರ್ವಿುಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ, ಪ್ರಾಜೆಕ್ಟ್ ಕೌಶಲ ಬೆಳೆಯುತ್ತದೆ. ಈ ಮೂಲಕ ಮೈಸೂರಿನ ಮಕ್ಕಳು ಅಂತಾರಾಷ್ಟ್ರೀಯ ರೋಬಾಟ್ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯಬೇಕು ಎನ್ನುವ ಆಸೆ ನನ್ನದು. | ಎಂ.ಎಸ್. ಸಂತೋಷ್​ಕುಮಾರ್ ಕಾರ್ಯದರ್ಶಿ, ಶಾಂತಲಾ ವಿದ್ಯಾಪೀಠ, ಮೈಸೂರು

ಅಧಿಕೃತ ಚಾಲನೆ ಇಂದು: ಶಾಲೆಯಲ್ಲಿ ನೂತನ ರೋಬಾಟ್ ಲ್ಯಾಬ್​ಗೆ ಮೇ 24ರಂದು ಅಧಿಕೃತ ಚಾಲನೆ ನೀಡಲಾಗುವುದು. ಶಾಲಾ ಆವರಣದಲ್ಲಿ ಸಂಜೆ 4ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಇತರರು ಭಾಗವಹಿಸಲಿದ್ದಾರೆ.