ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ತೆರಳಿದ್ದ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿಟ್ಟಿದ್ದ 2 ಲಕ್ಷ ರೂ. ಅಪಹರಿಸಿರುವ ಪ್ರಕರಣ ಇಂದಿರಾನಗರದಲ್ಲಿ ನಡೆದಿದೆ.
ಯಲಹಂಕ ರೈಲ್ವೆ ಇಲಾಖೆ ಸಿಬ್ಬಂದಿ ಸಿದ್ದಲಿಂಗಯ್ಯ ಎಂಬುವರು ಹಣ ಕಳೆದುಕೊಂಡಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ನಗರದ ಪರಮಣ್ಣ ಬಡಾವಣೆಯ ಎಸ್‌ಬಿಐ ಬ್ಯಾಂಕ್‌ಗೆ ಹಣ ಡ್ರಾ ಮಾಡಿಕೊಂಡು ವಾಪಾಸ್ ಇಂದಿರಾನಗರದಲ್ಲಿನ ಸಹೋದರಿ ಮನೆಗೆ ತೆರಳಿದ್ದರು. ಈ ವೇಳೆ ಮನೆ ಎದುರು ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಸ್ವಲ್ಪ ಸಮಯದ ಬಳಿಯ ವಾಪಸ್ ಬಂದು ನೋಡಿದಾಗ ಹಣ ನಾಪತ್ತೆಯಾಗಿರುವುದು ಗೊತ್ತಾಗಿದೆ.
ದೃಶ್ಯ ಸೆರೆ: ನಗರದ ಎಸ್‌ಬಿಐ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಬ್ಯಾಂಕ್ ನಲ್ಲಿ ಕುಳಿತು ಇವರನ್ನೇ ಗಮನಿಸಿದ್ದ ದೃಶ್ಯ ಸೆರೆಯಾಗಿದೆ. ಬಳಿಕ ಸಿದ್ದಲಿಂಗಯ್ಯ ಅವರನ್ನು ಹಿಂಬಾಲಿಸಿದ್ದು ನಗರ ಕೆಲವು ಕಚೇರಿ, ಅಂಗಡಿಯಲ್ಲಿ ಸೇರಿ ಹಲವು ಕಡೆಗಳಲ್ಲಿ ದುಷ್ಕರ್ಮಿ ಚಲನವಲನ ಪತ್ತೆಯಾಗಿದ್ದು ಪೊಲೀಸರು ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.