ಮುಳಬಾಗಿಲು: ತಾಲೂಕಿನ ಪುಲಿಪಾಪೇನಹಳ್ಳಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿಂದತೆ ಆರೋಪಿಯನ್ನು 26 ಗಂಟೆಯಲ್ಲಿ ಬಂಧಿಸಿದ ನಂಗಲಿ ಠಾಣೆ ಪೊಲೀಸರು ಚಿನ್ನ ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಕೆ.ಬಿಕ್ಕನಹಳ್ಳಿಯ ಎನ್.ನಾಗೇಶ್ (27) ಬಂಧಿತ.
ಪುಲಿಪಾಪೇನಹಳ್ಳಿಯಲ್ಲಿ ಜು.-24 ರಂದು ಮಂಕಿ ಕ್ಯಾಪ್, ಕಪ್ಪು ಜಾಕೆಟ್ ಮತ್ತು ನಿಕ್ಕರ್ ಧರಿಸಿ ಒಂಟಿ ಮನೆಗೆ ಪ್ರವೇಶಿಸಿದ ಆರೋಪಿ ಮನೆ ಮಾಲಕಿ ಕೊರಳಲ್ಲಿದ್ದ 30 ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ. ಮಹಿಳೆಯ ಪುತ್ರ ಜು-.25ರಂದು ತಾಯಿಯೊಂದಿಗೆ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸ್ ಅಧೀಕ್ಷ ಬಿ.ನಿಖಿಲ್ ಮಾರ್ಗದರ್ಶನದಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ರವಿಶಂಕರ್ ಮತ್ತು ಜಗದೀಶ್ ಹಾಗೂ ಮುಳಬಾಗಿಲು ಉಪ ವಿಭಾಗದ ಡಿವೈಎಸ್ಪಿ ಡಿ.ಸಿ.ನಂದಕುಮಾರ್ ಅವರ ಸಹಕಾರದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಕೆ.ಜಿ.ಸತೀಶ್, ನಂಗಲಿ ಪಿಎಸ್ಐ ಕುಮಾರಿ, ಮಮತಾ, ನಂಗಲಿ ಠಾಣೆ ಸಿಬ್ಬಂದಿ ಸಂತೋಷ್ ಕುಮಾರ್, ಶಿವರಾಜಚಾರಿ, ಜೀಪು ಚಾಲಕ ನಾರಾಯಣಸ್ವಾಮಿ ತಂಡ ಪ್ರಕರಣ ದಾಖಲಾದ ಕೆಲ ಹೊತ್ತಿನಲ್ಲೇ ಕಾರ್ಯಾಚರಣೆಗಿಳಿದು ಗುಪ್ತ ಮಾಹಿತಿದಾರರ ಸಹಕಾರದಿಂದ ಜು-.25ರ ಸಂಜೆ 7ಗಂಟೆಗೆ ಆರೋಪಿಯನ್ನು ಬಂಧಿಸಿ, ಚಿನ್ನ ವಶಕ್ಕೆ ಪಡೆದಿದ್ದಾರೆ.