ರಾಯಚೂರು ನಿಜಾಮಾಬಾದ್‌ನಿಂದ ತಿರುಪತಿಗೆ ತೆರಳುತ್ತಿದ್ದ ರಾಯಲ್ ಸೀಮಾ ಎಕ್ಸಪ್ರೆಸ್ ರೈಲಿನಲ್ಲಿ ದರೋಡೆಕೋರರು ಪ್ರಯಾಣಿಕರನ್ನು ಬೆದರಿಸಿ ಚಿನ್ನಾಭರಣ ಹಾಗೂ ನಗದು ಲೂಟಿ ಮಾಡಿದ ಘಟನೆ ಸೋಮವಾರ ಬೆಳಗಿನ ಜಾವ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗುತ್ತಿ ಹೊರವಲಯದಲ್ಲಿ ನಡೆದಿದೆ.
ಗುತ್ತಿ ಹೊರವಲಯದಲ್ಲಿ ಅಮರಾವತಿ ಎಕ್ಸಪ್ರೆಸ್ ರೈಲಿಗೆ ಮಾರ್ಗ ಕಲ್ಪಿಸಲು ರಾಯಲ್ ಸೀಮಾ ಎಕ್ಸಪ್ರೆಸ್ ನಿಲುಗಡೆ ಮಾಡಿದ್ದ ವೇಳೆ ಐವರು ದರೋಡೆಕೋರರು ರೈಲು ಗಾಡಿಯ ಎಸ್ 1,2,3,4 ಮತ್ತು 5 ರ ಬೋಗಿಯ ಪ್ರಯಾಣಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ತಿರುಪತಿಗೆ ಪ್ರಯಾಣಿಸುತ್ತಿದ್ದವರಿಂದ 30 ತೊಲೆ ಚಿನ್ನಾಭರಣ, ಎರಡು ಲಕ್ಷ ನಗದು ಕೊಳ್ಳೆ ಹೊಡೆದಿದ್ದಾರೆ.
ದರೋಡೆ ನಂತರ ರೈಲು ಮುಂದೆ ಸಾಗಿದ್ದರಿಂದ ತಿರುಪತಿ ರೈಲ್ವೆ ಸ್ಟೇಷನ್‌ಗೆ ಬಂದಿಳಿದ ಯಾತ್ರಿಕರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದು. ದೂರು ದಾಖಲು ಮಾಡಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.