ಜಿಲ್ಲೆ

ಉಗ್ರ ಕೃತ್ಯಕ್ಕೆ ದರೋಡೆ ದುಡ್ಡು ಬಳಕೆ!

ರಮೇಶ್​ ಕುಮಾರ್​​ ಬಿ ಎಡಮೋಳೆ

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಬೆಂಗಳೂರು ಹಾಗೂ ರಾಮನಗರದಲ್ಲಿ 2 ವರ್ಷದ ಹಿಂದೆ ಸೆರೆಸಿಕ್ಕಿದ್ದ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಸಂಘಟನೆಯ 6 ಉಗ್ರರ ಮತ್ತಷ್ಟು ಕರಾಳ ಕೃತ್ಯಗಳು ಬೆಳಕಿಗೆ ಬಂದಿವೆ. ಇವರು ಸಂಘಟನೆಗೆ ಬೇಕಾದ ಹಣ ಹೊಂದಿಸಲು ಬೆಂಗಳೂರು ಹೊರವಲಯದಲ್ಲಿ ಒಂಟಿಮನೆಗಳನ್ನು ಗುರಿಯಾಗಿಸಿಕೊಂಡು 4 ಕಡೆ ದರೋಡೆ ಮಾಡಿದ್ದ ಸಂಗತಿ ಬಯಲಾಗಿದೆ.

ಅತ್ತಿಬೆಲೆ, ಕೆ.ಆರ್.ಪುರ ಮತ್ತು ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ದರೋಡೆ ಮಾಡಿದ್ದನ್ನು ಬಂಧಿತರು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕೂ ಪ್ರಕರಣಗಳ ಎಫ್​ಐಆರ್ ಎನ್​ಐಎಗೆ ವರ್ಗಾವಣೆಯಾಗಿದೆ. ಪ್ರತ್ಯೇಕವಾಗಿ ಎಫ್​ಐಆರ್ ದಾಖಲಿಸಿಕೊಂಡು ಎನ್​ಐಎ ತಂಡ ತನಿಖೆ ಮುಂದುವರಿಸಿದೆ.

ಒಂಟಿಮನೆಗಳನ್ನು ಟಾರ್ಗೆಟ್ ಮಾಡಿ ಒಳನುಗ್ಗುತ್ತಿದ್ದ ಶಂಕಿತ ಉಗ್ರರು, ಭೂ ವ್ಯಾಜ್ಯ ಅಥವಾ ಹಣಕಾಸಿನ ವಿಚಾರದ ಸೋಗಿನಲ್ಲಿ ಜಗಳ ತೆಗೆದು ಹಲ್ಲೆ ನಡೆಸುತ್ತಿದ್ದರು. ನಂತರ ಕಬೋಡ್, ಲಾಕರ್ ಶೋಧಿಸಿ ಚಿನ್ನಾಭರಣ, ಹಣ ದೋಚಿ ಅಪರಿಚಿತರ ಹೆಸರು ಹೇಳಿ ಅವರ ಸಹವಾಸಕ್ಕೆ ಬಂದರೆ ಬಿಡುವುದಿಲ್ಲ ಎಂದು ಹೆದರಿಸಿ ಪರಾರಿಯಾಗುತ್ತಿದ್ದರು. ಹೀಗಾಗಿ ಮನೆ ಮಾಲೀಕರು, ತಮ್ಮ ಎದುರಾಳಿಗಳ ಕೃತ್ಯವೆಂದುಕೊಂಡು ಅದೇ ರೀತಿ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದರು. ಇದೊಂದು ಉಗ್ರರ ಕೃತ್ಯವೆಂಬುದು ಗೊತ್ತಾಗುತ್ತಿರಲಿಲ್ಲ. ಪೊಲೀಸರು ಕೂಡ ವೈಯಕ್ತಿಕ ದ್ವೇಷದ ಆಯಾಮದಲ್ಲೇ ತನಿಖೆ ನಡೆಸಿ ಸುಮ್ಮನಾಗುತ್ತಿದ್ದರು.

ರಾಮನಗರದಲ್ಲಿ ಸಿಕ್ಕಿಬಿದ್ರು: 2018ರ ಆಗಸ್ಟ್​ನಲ್ಲಿ ರಾಮನಗರದಲ್ಲಿ ಜೆಎಂಬಿ ಶಂಕಿತ ಉಗ್ರ ಮುನೀರ್ ಶೇಖ್ ಅಲಿಯಾಸ್ ಬೋಮ್ ಮಿಯಾನ್(38) ಮತ್ತು ಬಲಗೈ ಬಂಟ ಆದೀಲ್ ಶೇಖ್ ಸೇರಿ 6 ಶಂಕಿತರನ್ನು ಬಂಧಿಸಿದ್ದರು. 2018ರ ಡಿ.16ರಂದು ಪಶ್ಚಿಮ ಬಂಗಾಳದಲ್ಲಿ ಶಂಕಿತ ಮೊಸ್ರಾಫ್ ಹುಸೇನ್ ಅಲಿಯಾಸ್ ಮೂಸಾ ಎಂಬಾತನನ್ನು ಪತ್ತೆಹಚ್ಚಿದ್ದರು. ಬಾಂಗ್ಲಾದೇಶದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮುನೀರ್, ಜೈಲು ಬ್ರೇಕ್ ಮಾಡಿ 2011ರಲ್ಲಿ ಪಶ್ಚಿಮ ಬಂಗಾಳಕ್ಕೆ ಬಂದಿದ್ದ. ನಾಲ್ಕೈದು ವರ್ಷಗಳಿಂದ ಜೆಎಂಬಿ ಬಲಗೊಳಿಸುವ ಸಲುವಾಗಿ ಬೆಂಗಳೂರು ಮತ್ತು ಹೊರವಲಯದಲ್ಲಿ ಸಹಚರರ ಜತೆ ಸೇರಿ ಡಕಾಯಿತಿ ನಡೆಸಿ ಹಣ ಹೊಂದಿಸಿದ್ದ. ಸೋಲದೇವನಹಳ್ಳಿ ಬಾಡಿಗೆ ಮನೆಯಲ್ಲಿ ಸ್ಪೋಟಕಗಳನ್ನು ಸಿದ್ಧಪಡಿಸಿ ದೇಶದ ವಿವಿಧೆಡೆ ಸರಬರಾಜು ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಈತನ ಜತೆಗಿದ್ದ ಹಲವರನ್ನು ದೇಶದ ವಿವಿಧೆಡೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಎಲ್ಲಿ ಹೇಗೆ ರಾಬರಿ?

  1. ಕೆ.ಆರ್.ಪುರ: 2018ರ ಫೆ.27ರ ರಾತ್ರಿ 7.30ರಲ್ಲಿ ಕೆ.ಆರ್.ಪುರದ ಹಳೇ ದೇವಸಂದ್ರದಲ್ಲಿ ಮದನ್ ಕುಮಾರ್ ಎಂಬುವರ ಮನೆ ಕದ ತಟ್ಟಿದ್ದರು. ಬಾಗಿಲು ತೆರೆದು ಯಾರೆಂದು ಕೇಳುವಷ್ಟರಲ್ಲೇ ಯುವಕರ ಗ್ಯಾಂಗ್ ಒಳನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿತ್ತು. ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿತ್ತು. ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

2. ಕೊತ್ತನೂರು: 2018ರ ಮಾ.19ರ ರಾತ್ರಿ 8 ಗಂಟೆಯಲ್ಲಿ ಕೊತ್ತನೂರಿನ ಹೆಗಡೆನಗರದಲ್ಲಿರುವ ಶಿಕ್ಷಕಿ ಅನಿತಾ ಪಿ.ಮಜೂದಾರ್ ಎಂಬುವರ ಮನೆಗೆ ನುಗ್ಗಿದ್ದರು. ಪಿಸ್ತೂಲ್ ಮತ್ತು ಚಾಕು ತೋರಿಸಿ ಕೈಗೆ ಸಿಕ್ಕ 5 ಸಾವಿರ ರೂ. ಮತ್ತು ಮೊಬೈಲ್ ದೋಚಿದ್ದರು. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

3. ಅತ್ತಿಬೆಲೆ: 2018ರ ಮಾ.15ರ ರಾತ್ರಿ 7.30ರಲ್ಲಿ ನಾಗರಾಜ ರೆಡ್ಡಿ ಎಂಬುವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿ ಕೈಗೆ ಸಿಕ್ಕ ಜಮೀನು ದಾಖಲೆ ಪತ್ರಗಳು ಮತ್ತು 2 ಲಕ್ಷ ರೂ. ನಗದು ದೋಚಿದ್ದರು. ಅತ್ತಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4. ಅತ್ತಿಬೆಲೆ: 2018ರ ಏ.24ರ ರಾತ್ರಿ 7.30ರಲ್ಲಿ ಅತ್ತಿಬೆಲೆಯ ನೆರಳೂರು ಗ್ರಾಮದ ಮಲ್ಲೇಶ್ ಅವರ ಮನೆಗೆ ನುಗ್ಗಿ ಡೋರ್ ಲಾಕ್ ಮಾಡಿ ರೈಫಲ್, ಮಚ್ಚು ತೋರಿಸಿ ಕೂಗಿಕೊಳ್ಳದಂತೆ ಬೆದರಿಸಿದ್ದರು. ಮಲೇಶ್ ಅವರ ಕೈ ಕಾಲು ಕಟ್ಟಿ ಹಾಕಿ ಚಿನ್ನಾಭರಣ ಮತ್ತು 4.50 ಲಕ್ಷ ರೂ. ದೋಚಿದ್ದರು.

ಸಂರ್ಪತರ ಪತ್ತೆ

ಪ್ರತಿ ಬಾರಿ ಬಂಧನಕ್ಕೆ ಒಳಗಾದ ವ್ಯಕ್ತಿಯ ಜತೆ ಸಂಪರ್ಕಕ್ಕೆ ಇರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ವಿಚಾರಣೆ ನಡೆಸಲಾಗುತ್ತಿದೆ. ಜತೆಗೆ ಬೆಂಗಳೂರು ಮತ್ತು ಹೊರವಲಯ ಪೊಲೀಸರು ಸಹ ಜೆಎಂಬಿ ಬೆಂಬಲಿಗರ ಪತ್ತೆಗೆ ಬಲೆಬೀಸಿದ್ದಾರೆ. ಡಿ.16ರಂದು ಬಂಧನಕ್ಕೆ ಒಳಗಾದ ಮೊಸ್ರಾಫ್ ಹುಸೇನ್​ನನ್ನು ಕೋಲ್ಕತ್ತ ಎನ್​ಐಎ ವಿಶೇಷ ಕೋರ್ಟ್​ಗೆ ಹಾಜರುಪಡಿಸಿ ಟ್ರಾನ್ಸಿಟ್ ವಾರಂಟ್ ಪಡೆದಿದ್ದು, ಬೆಂಗಳೂರು ಎನ್​ಐಎ ವಿಶೇಷ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ. ಸೋಲದೇವನಹಳ್ಳಿ ಬಾಡಿಗೆ ಮನೆಯಲ್ಲಿ ಸ್ಪೋಟಕ ಪ್ರಕರಣದಲ್ಲಿಯೂ ಈತನ ಕೈವಾಡ ಇರುವುದು ಬೆಳಕಿಗೆ ಬಂದಿದೆ ಎಂದು ಎನ್​ಐಎ ಮೂಲಗಳು ತಿಳಿಸಿವೆ.