ಜಿಲ್ಲೆ

ಪೊಲೀಸರ ಮೇಲೆ ಮಚ್ಚುಬೀಸಿದ ರೌಡಿಶೀಟರ್‌ಗೆ ಗುಂಡೇಟು!

arunakunigal

ತುಮಕೂರು: ದರೋಡೆ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿಲು ಹೋಗಿದ್ದ ಪೊಲೀಸರ ಮೇಲೆ ಮಚ್ಚುಬೀಸಿದ ರೌಡಿಶೀಟರ್​ಗೆ ಗುಂಡೇಟು ತಗುಲಿದೆ.

ಇತ್ತೀಚೆಗೆ ಹಾಡುಹಗಲೇ‌ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಕೇಸ್​ಗೆ ಸಂಬಂಧಿಸಿದಂತೆ 10 ಮಂದಿಯನ್ನು ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದರು. ದರೋಡೆ ಪ್ರಕರಣದ ಪ್ರಮುಖ ಆರೋಪಿ ‌ರೋಹಿತ್ ತಲೆಮರೆಸಿಕೊಂಡಿದ್ದ. ಈತ ಮಾರನಾಯಕನಪಾಳ್ಯದ ಬಳಿ ಇರುವುದನ್ನು ಖಚಿತಪಡಿಸಿಕೊಂಡ ತಿಲಕ್ ಪಾರ್ಕ್ ಠಾಣೆ ಸಿಪಿಐ ಮುನಿರಾಜು ನೇತೃತ್ವದ ಪೊಲೀಸರು ಬಂಧಿಸಲು ಶನಿವಾರ ತೆರಳಿತ್ತು.

ರೋಹಿತ್ ಸಹಚರರು ಇತ್ತೀಚೆಗೆ ವಾಲ್ಮೀಕಿನಗರದ 6ನೇ ಕ್ರಾಸ್‌ನ ವಿಶ್ವೇಶ್ವರ ಆರಾಧ್ಯ ಮನೆಗೆ ನುಗ್ಗಿ ಮಚ್ಚು, ಲಾಂಗ್‌ ತೋರಿಸಿ 5.87 ಲಕ್ಷ ರೂ., ಮೌಲ್ಯದ 4 ಚಿನ್ನದ ಬಳೆಗಳು, 72 ಸಾವಿರ ನಗದು ಹಾಗೂ ಎರಡು ಮೊಬೈಲ್ ದೋಚಿದ್ದರು. ರೋಹಿತ್​ನನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಆರೋಪಿ ಮಚ್ಚಿನಿಂದ ಹಲ್ಲೆ ನಡೆಸಲು ಮುಂದಾಗಿದ್ದ. ಆಗ ಆತನ ಬಲಗಾಲಿಗೆ ತಿಲಕ್‌ಪಾರ್ಕ್ ಠಾಣೆ ಇನ್‌ಸ್ಪೆಕ್ಟರ್ ಮುನಿರಾಜು ಗುಂಡು ಹಾರಿಸಿದ್ದಾರೆ.

ಗಾಯಗೊಂಡ ರೋಹಿತ್​ಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ರೋಹಿತ್ ಮೇಲೆ ವಿವಿಧ ಠಾಣೆಗಳಲ್ಲಿ ಕೊಲೆ, ಸುಲಿಗೆ, ಬೆದರಿಕೆಗೆ ಸಂಬಂಧಿಸಿದಂತೆ 16 ಪ್ರಕರಣಗಳು ದಾಖಲಾಗಿವೆ.