ಮಡಿಕೇರಿ: ನಗರದ ಅಪ್ಪಚ್ಚ ಕವಿ ರಸ್ತೆಯ ಮನೆಯಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೌಳಿಬೀದಿಯ ನಿವಾಸಿ ಲೋಕೇಶ್(೩೭) ಹಾಗೂ ಅಕ್ಕಸಾಲಿಗ ಬಿ.ಎಸ್.ವಸಂತ(೬೦) ಬಂಧಿತ ಆರೋಪಿಗಳು.
ಅ೧೧ ರಂದು ಹಾಡಹಗಲೇ ದಿನೇಶ್ ರಾವ್ ಎಂಬವರ ಮನೆಗೆ ಹೊಂಚು ಹಾಕಿ ನುಗ್ಗಿದ ಲೋಕೇಶ್, ಮನೆಯಲ್ಲಿ ಒಬ್ಬಂಟಿಯಾಗಿದ್ದ ದಿನೇಶ್ ಅವರ ಪತ್ನಿ ಇಂದುಮತಿಯ ಬಾಯಿ ಮುಚ್ಚಿ ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಹಾಗೂ ಕಿವಿಯೋಲೆ ಕದ್ದೊಯ್ದಿದ್ದಾನೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ೩ ವಿಶೇಷ ತಂಡಗಳನ್ನು ರಚಿಸಿ ತನಿಖೆ ಬಿರುಸುಗೊಳಿಸಿ ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿಯನ್ನು ಕುಶಾಲನಗರದಲ್ಲಿ ಬಂಧಿಸಿದ್ದಾರೆ.
ಮಡಿಕೇರಿಯ ಚಿನ್ನದ ಅಂಗಡಿಯಲ್ಲಿ ಅಡವಿಟ್ಟಿದ್ದ ೬೫.೯ ಗ್ರಾಂ ತೂಕದ ೩ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. ೫೨,೬೦೦ ನಗದನ್ನು ವಶಪಡಿಸಿಕೊಂಡಿದೆ. ಅಲ್ಲದೆ, ಚಿನ್ನ ಅಡಮಾನವಿಟ್ಟುಕೊಂಡ ವಸಂತ ಅವರನ್ನು ಬಂಧಿಸಲಾಗಿದೆ. ಆರೋಪಿ ಕೆಲ ದಿನಗಳಿಂದ ಮನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಎನ್ನಲಾಗಿದ್ದು, ಇಂದುಮತಿ ಅವರ ಪತಿ ಇಲ್ಲದ ಸಮಯ ಸಾಧಿಸಿ ಮನೆಗೆ ನುಗ್ಗಿ ಬೆದರಿಸಿ ಕಳವು ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ನಿರ್ದೇಶನ, ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಮಾರ್ಗದರ್ಶನ, ನಗರ ವೃತ್ತ ನಿರ್ದೇಶಕ ಎಚ್.ಜಿ.ಶಿವಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕ ಶ್ರೀನಿವಾಸ್, ಅಪರಾಧ ವಿಭಾಗದ ಉಪನಿರೀಕ್ಷಕಿ ರಾಧಾ, ಪ್ರೊಬೆಷನ್ ಪಿಎಸ್‌ಐ ಲಕ್ಷ್ಮಣ್ ಕಾಮಣ್ಣನವರ್, ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ನಾಗರಾಜ್ ಎಸ್.ಕಡಗನ್ನವರ್, ಬಿ.ಓ.ಸುನಿಲ್ ,ಎಂ.ಎನ್.ಪ್ರದೀಪ್ ಕುಮಾರ್, ಜಿ.ರುದ್ರಪ್ಪ, ವೃತ್ತ ಕಚೇರಿಯ ಸಿಬ್ಬಂದಿಗಳು ಇತರರಿದ್ದರು.