ವಿಜಯವಾಣಿ ಸುದ್ದಿಜಾಲ ಉಡುಪಿ
ನೆಲಮಂಗಲದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ, ಗರುಡಾ ಗ್ಯಾಂಗ್ನ ಸದಸ್ಯ ಇಸಾಕ್ (27), ಮತ್ತೊಮ್ಮೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನೆಲಮಂಗಲದ ಪೊಲೀಸರು ಮಂಗಳವಾರ ರಾತ್ರಿ ಮಣಿಪಾಲಕ್ಕೆ ಆಗಮಿಸಿ, ಇಸಾಕ್ ಇದ್ದ ಕಾರನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದು, ಈ ವೇಳೆ ವೇಗವಾಗಿ ತನ್ನ ವಾಹನ ಚಾಲಿಯಿಸುತ್ತ ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದನು. ಘಟನೆಯಲ್ಲಿ ಇನ್ಸ್ಪೆಕ್ಟರ್ ಸಹಿತ ಐವರು ಪೊಲೀಸರು ಗಾಯಗೊಂಡಿದ್ದರು.
ಪೊಲೀಸರ ಕಣ್ಣು ತಪ್ಪಿಸಿ ಮಣಿಪಾಲದಿಂದ ಸುಮಾರು 3 ಕಿ.ಮೀ. ದೂರ ಸಾಗಿದ ಬಳಿಕ ಆತನ ಕಾರ್ ಟೈರ್ ಪಂಕ್ಚರ್ ಆಗಿದೆ. ಹೀಗಾಗಿ ಮಣ್ಣಪಳ್ಳದ ರಸ್ತೆಯಲ್ಲಿ (ವಿರುದ್ಧ ದಿಕ್ಕಿನಲ್ಲಿ) ತನ್ನ ಕಾರು ನಿಲ್ಲಿಸಿ, ಬಾಗಿಲು ತೆರೆದು ಬಲಭಾಗದಲ್ಲಿರುವ ನಿರ್ಜನ ಪ್ರದೇಶ (ಗುಡ್ಡ)ದತ್ತ ಓಡಿ ಹೋಗುತ್ತಿರುವುದು ಹಾಗೂ ಒಂದೆರಡು ನಿಮಿಷದ ಬಳಿಕ ಆ ಕಾರಿನಲ್ಲಿದ್ದ ಆತನ ಗೆಳತಿ, ಬುರ್ಕಾ ಧರಿಸಿದ್ದ ಸುಜೈನ್ (23) ಮೊಬೈಲ್ ಟಾರ್ಚ್ ಬೆಳಕು ಮಾಡಿಕೊಂಡು ಓಡಿ ಹೋಗುತ್ತಿರುವ ದೃಶ್ಯವೂ ಸಹ ಸಮೀಪದ ಬೈಕ್ ಶೆಡ್ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಸಾಕ್ ಓಡಿ ಪರಾಯಾಗಿದ್ದರೂ ಸಹ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆತನ ಗೆಳತಿ ಸುಜೈನ್ಳನ್ನು ಪೊಲೀಸರು ಮಂಗಳವಾರ ರಾತ್ರಿಯೇ ಬಂಧಿಸಿದ್ದಾರೆ. ಆರೋಪಿ ಇಸಾಕ್ಗೆ ಸಹಕಾರ ನೀಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಸುಜೈನ್, ಸುಳ್ಯ ಮೂಲದ ಕಾನೂನು ಪದವಿ ವಿದ್ಯಾರ್ಥಿನಿ. ಆಕೆಯ ಸಹೋದರಿಯ ಶಿಕ್ಷಣದ ಸಲುವಾಗಿ ಅವರ ತಾಯಿ ಮಣಿಪಾಲದ ವಸತಿ ಸಮುಚ್ಚಯದಲ್ಲಿ ಉಳಿದುಕೊಂಡಿದ್ದಳು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಮಣಿಪಾಲದಲ್ಲಿ ನೆಲೆಸಿರುವ ಕೇರಳದ ಕಾಸರಗೋಡಿನ ಮಾಸ್ತಿಕುಂಡು ನಿವಾಸಿ, ಬಂಧನಕ್ಕೊಳಗಾದ ಸುಜೈನ್ಳ ತಾಯಿ ಫಾತಿಮಾ ನಜಾದ್ (48)ಳನ್ನೂ ಮಣಿಪಾಲ ಪೊಲೀಸರು ಗುರುವಾರ ಬಂಧಿಸಿದ್ದು, ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಗಳಂತೆ ಆಕೆಯೂ ಪರಾರಿಯಾಗಲು ಯತ್ನಿಸಿದ್ದರಿಂದ ಹಾಗೂ ಮಾಹಿತಿ ಇದ್ದರೂ ಆರೋಪಿಗಳಿಗೆ ಸಹಕರಿಸಿದ್ದರಿಂದ ಫಾತಿಮಾಳಿಗೆ ನ್ಯಾಯಾಧೀಶರು 12 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ರಸ್ತೆಯಲ್ಲೇ ಇಸಾಕ್ ಬಿಟ್ಟು ಹೋದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎಸ್ಐ ಸೋಮಶೇಖರ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿಸಿರುವ ಪೊಲೀಸರು, ಇಸಾಕ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ನಾವುಂದ ಮೂಲದ ಇಸಾಕ್, ಮಂಗಳೂರಿನಲ್ಲಿ ವಾಸ್ತವ್ಯ ಮಾಡಿದ್ದನು. ಆತನ ವಿರುದ್ಧ ಬೆಂಗಳೂರು, ಕಾರ್ಕಳ, ಉಡುಪಿ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ದರೋಡೆ, ದೊಂಬಿ, ದನ ಕಳ್ಳತನ ಪ್ರಕರಣ ದಾಖಲಾಗಿದೆ. ಕಾಪು ಗರುಡ ಗ್ಯಾಂಗ್ನ ಸದಸ್ಯನಾಗಿರುವ ಆತ, 2024ರ ಮೇ 18ರಂದು ನಸುಕಿನ ವೇಳೆ ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗ್ಯಾಂಗ್ವಾರ್ನಲ್ಲಿಯೂ ಇದ್ದ ಎಂಬ ಶಂಕೆ ಪೊಲೀಸರಿಗಿತ್ತು. ಆತನ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿದ್ದನು.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಥಳಿಯನೋರ್ವನನ್ನು ಅಪಹರಿಸಿ 40 ಲಕ್ಷ ರೂ. ದರೋಡೆ ಮಾಡಲಾಗಿತ್ತು. ಆ ತಂಡದಲ್ಲಿ ಇಸಾಕ್ ಎರಡನೇ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದನು. ಆತನ ಬಂಧನಕ್ಕಾಗಿ ಬೆಂಗಳೂರಿನ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಮಾ.4ರಂದು ಮಣಿಪಾಲಕ್ಕೆ ಬಂದಿದ್ದರು. ಗೆಳತಿ ಸುಜೈನ್ ಹಾಗೂ ಆಕೆಯ ಕುಟುಂಬ ಉಳಿದುಕೊಂಡಿದ್ದ ಮಣಿಪಾಲದ ಡಿಸಿ ಕಚೇರಿ ರಸ್ತೆ ಮಾರ್ಗದಲ್ಲಿರುವ ವಸತಿ ಸಮುಚ್ಚಯಕ್ಕೆ ಆತ ಬರುವ ಮಾಹಿತಿ ಪೊಲೀಸರಿಗೆ ದೊರಕಿತ್ತು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಎಸ್ಐ ಸೋಮಶೇಖರ್ ಮತ್ತು ಪೊಲೀಸ್ ನಿರೀಕ್ಷಕ ನರೇಂದ್ರ ಬಾಬು ಹಾಗೂ ಸಿಬ್ಬಂದಿ ಮಣಿಪಾಲದಲ್ಲಿ ಕಾದು ಕುಳಿತಿದ್ದರು. ಈ ವೇಳೆ ಅಲ್ಲಿಗೆ ನಂಬರ್ ಪ್ಲೇಟ್ ಇಲ್ಲದ ಮಹೇಂದ್ರ ಥಾರ್ ಕಾರಿನಲ್ಲಿ ಇಸಾಕ್ ಬಂದಿದ್ದು, ಪೊಲೀಸರು ಸಿನಿಮೀಯ ರೀತಿಯಲ್ಲಿ ಆತನನ್ನು ಬಂಧಿಸುವಲ್ಲಿ ಯತ್ನಿಸಿದ್ದರು. ಆದರೆ, ಆತ ಮತ್ತೊಮ್ಮೆ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಗೆಳತಿಯನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡಿದ್ದು, ಗುರುವಾರದಂದು ಆಕೆಯ ತಾಯಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಇಸಾಕ್ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲಿಯೇ ಆತನನ್ನೂ ಬಂಧಿಸುತ್ತೇವೆ. | ಡಾ.ಅರುಣಕುಮಾರ್ ಕೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ