ಜಿಲ್ಲೆ

ಜೋಳ ಖರೀದಿ ನೆಪದಲ್ಲಿ ₹2.5 ಲಕ್ಷ ದೋಚಿದ ಖದೀಮರು

ಎಪಿಎಂಸಿ ಅಂಗಡಿ ಮಾಲೀಕನ ಗಮನಸೆಳೆದು ಕೃತ್ಯ
ಚಿಂತಾಮಣಿ ನಗರ ಠಾಣೆಯಲ್ಲಿ ದೂರು

ಚಿಂತಾಮಣಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಮಳಿಗೆಯೊಂದರಲ್ಲಿ ಗುರುವಾರ ಬೆಳಗ್ಗೆ ಮುಸುಕಿನ ಜೋಳ ಖರೀದಿ ಮಾಡಲು ಬಂದಿದ್ದ ಇಬ್ಬರು, ಜೋಳದ ಸ್ಯಾಂಪಲ್ ನೋಡುವ ನೆಪದಲ್ಲಿ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಗಲ್ಲಾಪೆಟ್ಟಿಗೆಯಲ್ಲಿದ್ದ 2.50 ಲಕ್ಷ ರೂ.ಗಳನ್ನು ದೋಚಿದ್ದಾರೆ.
ನಗರದ ಚೇಳೂರು ರಸ್ತೆಯಲ್ಲಿರುವ ರಮೇಶ್ ಟ್ರೇಡರ್ಸ್ ಅಂಗಡಿ ಮಾಲೀಕ ಪಿ.ಜಿ. ನಾಗರಾಜು ಹಣ ಕಳೆದುಕೊಂಡವರು. ಗುರುವಾರ ಸಂಜೆ ನಗರಠಾಣೆಯಲ್ಲಿ ದೂರು ದಾಖಲಾಗಿದೆ.

ಮುಸುಕಿನ ಜೋಳದ ಪಾವತಿಗಾಗಿ ಬ್ಯಾಂಕ್‌ನಲ್ಲಿ ಡಿ.ಡಿ. ಖರೀದಿಸಲು ಗುರುವಾರ ಬೆಳಗ್ಗೆ ಮನೆಯಿಂದ 2.50 ಲಕ್ಷ ರೂ.ಗಳನ್ನು ತಂದು ಅಂಗಡಿಯ ಗಲ್ಲಾ ಪೆಟ್ಟಿಗೆಯಲ್ಲಿಟ್ಟಿದ್ದರು. ಬೆಳಗ್ಗೆ ಸುಮಾರು 8.30 ಗಂಟೆಯಲ್ಲಿ ವ್ಯಾಪಾರದ ನೆಪದಲ್ಲಿ ಅಂಗಡಿಗೆ ಬಂದ ಇಬ್ಬರ ಪೈಕಿ ಒಬ್ಬ ಮುಸುಕಿನ ಜೋಳದ ಸ್ಯಾಂಪಲ್ ತೋರಿಸುವಂತೆ ನಾಗರಾಜು ಅವರನ್ನು ಕೇಳಿದ್ದಾನೆ. ಸ್ಯಾಂಪಲ್ ತೋರಿಸಲು ಮಾಲೀಕ ಗ್ರಾಹಕನ ಸೋಗಿನಲ್ಲಿದ್ದವನನ್ನು ಅಂಗಡಿಯ ಒಳಗೆ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಗಲ್ಲಾಪೆಟ್ಟಿಗೆ ಸಮೀಪದಲ್ಲಿ ನಿಂತಿದ್ದ ಮತ್ತೊಬ್ಬ 2.50 ಲಕ್ಷ ರೂ.ಗಳನ್ನು ಕದ್ದು ಹೊರಟು ಹೋಗಿದ್ದಾನೆ.

ನಂತರ ಬ್ಯಾಂಕ್‌ಗೆ ಸಮಯಕ್ಕೆ ಸರಿಯಾಗಿ ಹಣ ಕಟ್ಟಲು ಗಲ್ಲಾಪೆಟ್ಟಿಗೆ ತೆರೆದಾಗ ಹಣ ಕಳವಾಗಿರುವುದು ಕಂಡುಬಂದಿದೆ.
ಜೋಳ ಖರೀದಿ ಮಾಡಲು ಬಂದು ಹಣ ಎಗರಿಸಿದದವರು ಸುಮಾರು 40-45 ವಯಸ್ಸಿನವರಾಗಿದ್ದು, 5.6 ಅಡಿ ಎತ್ತರವಿದ್ದಾರೆ. ತೆಲುಗು ಮಾತನಾಡುತ್ತಿದ್ದರು ಎಂದು ಅಂಗಡಿ ಮಾಲೀಕ ನಾಗರಾಜು ದೂರಿನಲ್ಲಿ ತಿಳಿಸಿದ್ದಾರೆ.