ಜಿಲ್ಲೆ

ಎನ್‌ಆರ್‌ಐ ಮಹಿಳೆಗೆ ಗರ್ಭಕೋಶ ಶಸಚಿಕಿತ್ಸೆ

ಪಂಕಜ ಕೆ.ಎಂ.

ಬೆಂಗಳೂರು: ಹಿಗ್ಗಿದ ಗರ್ಭಕೋಶ ಸಮಸ್ಯೆಗೆ ಒಳಗಾಗಿದ್ದ 39 ವರ್ಷದ ಎನ್‌ಆರ್‌ಐ ಮಹಿಳೆಗೆ ಜನನಾಂಗದ ಮೂಲಕ ರೋಬಾಟಿಕ್ ಶಸಚಿಕಿತ್ಸೆ ನಡೆಸಿ ಗರ್ಭಕೋಶವನ್ನು ಯಥಾಸ್ಥಿತಿ ಮರುಸ್ಥಾಪಿಸುವಲ್ಲಿ ನಗರದ ಖಾಸಗಿ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ.

ಈ ಕುರಿತು ಆಸ್ಪತ್ರೆಯ ಮೂತ್ರಶಾಸ್ತ್ರ, ಸ್ತ್ರೀರೋಗ-ಆಂಕೊಲಾಜಿ ಮತ್ತು ರೋಬಾಟಿಕ್ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರ್ತಿ ಡಾ. ರುಬಿನಾ ಶಾನವಾಜ್ ಮಾತನಾಡಿ, ಎರಡು ಮಕ್ಕಳನ್ನು ಹೊಂದಿರುವ 39 ವರ್ಷದ ಎನ್‌ಆರ್‌ಐ ಮಹಿಳೆ ನಾಲ್ಕು ವರ್ಷಗಳ ಹಿಂದೆಯೇ ಗರ್ಭಕೋಶವು ಜನನಾಂಗದ ಮೂಲಕ ಚಾಚಿಕೊಂಡಿರುವ ಸಮಸ್ಯೆ ಹೊಂದಿದ್ದರು. ಸಾಮಾನ್ಯವಾಗಿ ಋತುಚಕ್ರ ನಿಂತ ಬಳಿಕ ಕೆಲವರಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ ಇವರಿಗೆ ಮೊದಲೇ ಕಂಡುಬಂದಿತ್ತು.

ಇಂತಹ ಸಮಸ್ಯೆಗಳಲ್ಲಿ ಕೆಲವರು ಗರ್ಭಕೋಶವನ್ನೇ ತೆಗೆದುಹಾಕುವ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಾರೆ. ಇವರಿಗೂ ಹಲವು ಆಸ್ಪತ್ರೆಗಳಲ್ಲಿ ಗರ್ಭಕೋಶ ತೆಗೆಸುವ ಸಲಹೆ ನೀಡಲಾಗಿತ್ತು. ಆದರೆ, ನಾವು ಕೆಳಗೆ ಜಾರಿದ ಗರ್ಭಕೋಶವನ್ನು ರೋಬಾಟಿಕ್ ನೆರವಿನೊಂದಿಗೆ ಮೇಲೆತ್ತುವ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದೇವೆ. ಇದೀಗ ಮಹಿಳೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವಿವರಿಸಿದರು.