ಜಿಲ್ಲೆ

ರೈಲ್ವೆ ಮೇಲ್ಸೇತುವೆ ಕೇಂದ್ರ ಅನುಮೋದನೆ, ಬಿಜೆಪಿ ಸಂಭ್ರಮಾಚರಣೆ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ನಗರದ ವಿವಿಧಡೆ ರೈಲ್ವೆ ಮೇಲ್ಸೇತುವೆ ನಿಮಾರ್ಣ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಪದಾಧಿಕಾರಿಗಳು ಸ್ಥಳಿಯರ ಜತೆ ಸೇರಿ ಮಂಗಳವಾರ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಗರದ ಬಡ್ಡಿಹಳ್ಳಿ ಗೇಟ್​, ಬಟವಾಡಿ ಗೇಟ್​, ಕ್ಯಾತಸಂದ್ರದ ಮೈದಾಳ ಗೇಟ್​, ಅರೆಯೂರು ಗೇಟ್​, ನಿಟ್ಟೂರು ಬಳಿಯ ರೈಲ್ವೆ ಗೇಟ್​ಗಳನ್ನು ತೆರವು ಮಾಡಿ 350 ಕೋ.ರೂ., ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಹಿನ್ನೆಲೆ ಮಂಗಳವಾರ ಬಟವಾಡಿ, ಬಡ್ಡಿಹಳ್ಳಿ ರೈಲ್ವೆ ಗೇಟ್​ ಬಳಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಈ ಕಾರ್ಯಕ್ಕೆ ನೆರವಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನ್​ ವೈಷ್ಣವ್​ ಗೆ ಧನ್ಯವಾದ ತಿಳಿಸಿ, ಜಯಘೋಷಗಳನ್ನು ಹಾಕಿದರು.

ಈ ವೇಳೆ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್​.ಶಿವಪ್ರಸಾದ್​, ಅಭಿವೃದ್ಧಿ ಹರಿಕಾರರೆಂದೇ ಹೆಸರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಧಿಕಾರ ವಹಿಸಿಕೊಂಡ 35 ದಿನಗಳಲ್ಲೇ ನಗರ ಹಾಗೂ ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಾದ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಅನುಮೋದನೆ ದೊರಕಿದೆ. ಇದು ಸಚಿವರ ಇಚ್ಛಾಶಕ್ತಿಗೆ ಕಾರಣ. ಈ ಸೇತುವೆ ನಿಮಾರ್ಣ ವೆಚ್ಚದ ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ಒದಗಿಸಲಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಇಲ್ಲ ಎಂದರು.

ಸ್ಫೂರ್ತಿ ಡೆವಲಪರ್ಸ್​ನ ಎಸ್​.ಪಿ.ಚಿದಾನಂದ್​ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ತುಮಕೂರು ನಗರದಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ನಿಮಾರ್ಣ ಅತ್ಯಗತ್ಯವಾಗಿದ್ದು, ಸಚಿವ ಸೋಮಣ್ಣ ಹಾಗೂ ಶಾಸಕ ಜ್ಯೋತಿಗಣೇಶ್​ ಅವರು ಈ ಕಾರ್ಯದಲ್ಲಿ ಶ್ರಮಿಸುತ್ತಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎಚ್​.ಎಂ.ರವೀಶಯ್ಯ, ಮುಖಂಡರಾದ ಎಂ.ವೈ.ರುದ್ರೇಶ್​, ಜಗದೀಶ್​, ಪ್ರಕಾಶ್​ ಭಾರಧ್ವಜ್​, ಹನುಮಂತಪ್ಪ, ಕೆ.ಎಸ್​.ಕುಮಾರ್​, ಜಯಪ್ರಕಾಶ್​, ಮಸೀದಿಯ ಮುತುವಲ್ಲಿ ರಹಮತ್​ ಉಲ್ಲಾ ಖಾನ್​, ನಿವೃತ್ತ ಪ್ರಾಚಾರ್ಯ ನರಸಿಂಹನ್​, ಕೃಷ್ಣಮೂರ್ತಿ, ನಟರಾಜ್​, ರುದ್ರಪ್ಪ, ಮರಿಬಸಪ್ಪ, ಉಮಾಮಹೇಶ್​, ಅಂಗಡಿ ಮಂಜುನಾಥ್​, ಎಚ್​ಎಂಟಿ ಆಂಜನಪ್ಪ, ನಿಶ್ಚಲ್​, ಚೇತನ್​, ಮೂರ್ತಿ, ಮಮತಾ, ಲತಾ, ಪವಿತ್ರಾ, ಸಂಧ್ಯಾ, ಅನ್ನಪೂರ್ಣಮ್ಮ, ಗಾಯತ್ರಿ, ಶಿಲ್ಪ, ಶಶಿ, ಉಮಾ ಮತ್ತಿತರರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ತುಮಕೂರಿಗರ ಬಹುದಿನಗಳ ಬೇಡಿಕೆಯಾದ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನ್​ ವೈಷ್ಣವ್​ ಹಾಗೂ 35 ದಿನಗಳಲ್ಲೇ ಈ ಯೋಜನೆಗಳಿಗೆ ಅನುಮೋದನೆ ಪಡೆದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣಗೆ ನಗರ ಹಾಗೂ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುವೆ. ಜಿ.ಬಿ.ಜ್ಯೋತಿಗಣೇಶ್​ ನಗರ ಶಾಸಕ ಜನರ ಬಹುದಿನಗಳ ರೈಲ್ವೆ ಮೇಲ್ಸೇತುವೆ ಬೇಡಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರ ಜತೆಗೆ ನಗರದ ರೈಲ್ವೆ ನಿಲ್ದಾಣದ ಉನ್ನತಿಕರಣ, ತುಮಕೂರು-&ರಾಯದುರ್ಗ, ತುಮಕೂರು-ದಾವಣಗೆರೆ ರೈಲು ಮಾರ್ಗದ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಜನರಿಗೆ ಅರ್ಪಣೆ ಮಾಡಲು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಸಂಕಲ್ಪ ಮಾಡಿದ್ದಾರೆ. ಸಚಿವರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲೆಯ ಜನರು ನಿರೀಕ್ಷೆ ಮಾಡಬಹುದಾಗಿದೆ. ಎಚ್​.ಎಸ್​.ರವಿಶಂಕರ್​ ಜಿಲ್ಲಾಧ್ಯಕ್ಷ, ಬಿಜೆಪಿ