ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಸಿದ್ದಾಪುರ ಹಾಗೂ ಹೆಬ್ರಿ ಸಂಪರ್ಕಿಸುವ ಬಡ್ತಾನಬೈಲಿನಿಂದ ಹಾಲಿಕೋಡ್ಲು ತನಕ ಸುಮಾರು ಒಂದು ಕಿಲೋಮೀಟರ್ ರಸ್ತೆ ಕಿರಿದಾಗಿದ್ದು, ಬೃಹತ್ ವಾಹನಗಳು ಎದುರಾದಾಗ ಸಂಚಾರವೇ ದುಸ್ತರವಾಗುತ್ತದೆ.
ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳೂ ಇದ್ದು, ಸೈಡ್ ಕೊಡುವ ಸಂದರ್ಭ ವಾಹನಗಳು ಚರಂಡಿಗೆ ಬೀಳುವ ಅಪಾಯವಿದೆ. ಜತೆಗೆ ಬೃಹತ್ ಗುಂಡಿಗಳೂ ಇದ್ದು, ಇವುಗಳನ್ನು ಮುಚ್ಚುವ ಸಲುವಾಗಿ ಮಣ್ಣು ಸುರಿದಿರುವುದುರಿಂದ ಕೆಸರು ತುಂಬಿಕೊಳ್ಳುತ್ತಿವೆ. ಇದು ಅಪಘಾತಗಳಿಗೂ ಕಾರಣಗಳಾಗುತ್ತಿವೆ.
ರಸ್ತೆಗೆ ಹೊಂದಿಕೊಂಡು ಹಲವೆಡೆ ಅಪಾಯಕಾರಿ ಮರಗಳು ವಾಲಿಕೊಂಡಿವೆ. ಇಂತಹ ಮರಗಳ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೆ ಸ್ಪಂದನೆ ದೊರೆತಿಲ್ಲ. ವಾಹನ ಸಂಚರಿಸುವ ಸಂದರ್ಭ ಮರ ಉರುಳಿ ವಾಹನ ಮೇಲೆ ಬೀಳುವ ಅಪಾಯವೂ ಇದೆ.
ಬಡ್ತಾನಬೈಲಿನಿಂದ ಹಾಲಿಕೋಡ್ಲು ರಸ್ತೆಯು ಅರಣ್ಯ ಇಲಾಖೆಗೆ ಸೇರಿದ್ದು, ಅರಣ್ಯ ಇಲಾಖೆಯಿಂದ ರಸ್ತೆ ಅಗಲೀಕರಣಕ್ಕೆ ಅನುಮತಿ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಊರಿನವರು ಜತೆಗೂಡಿ ಪ್ರತಿಭಟನೆ ನಡೆಸಿದ್ದರು. ಬಳಿಕ ಸಂಬಂಧಪಟ್ಟವರು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯದೇ ಕಾರ್ಯ ಆರಂಭಿಸಿ ಸಮಸ್ಯೆ ತಂದೊಡ್ಡಿದ್ದರು. ಪ್ರಸ್ತುತ ಮತ್ತೊಮ್ಮೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದ್ದು, ನಿರಾಕ್ಷೇಪಣಾ ಪತ್ರಕ್ಕೆ ಮನವಿ ಮಾಡಲಾಗಿದೆ.
ರಸ್ತೆಯ ಅಗಲೀಕರಣಕ್ಕಾಗಿ ಅರಣ್ಯ ಇಲಾಖೆಗೆ ನಿರೀಕ್ಷೇಪಣಾ ಪತ್ರ ಸಲ್ಲಿಸಲಾಗಿದೆ. ಒಂದು ಹಂತದ ಪ್ರಕ್ರಿಯೆ ಮುಗಿದಿದ್ದು, ಎರಡನೇ ಹಂತದಲ್ಲಿ ರಸ್ತೆಗೆ ಸಂಬಂಧಿಸಿತ ಮಾಹಿತಿ ಕೇಳಿರುವುದರಿಂದ ಸ್ಥಳೀಯ ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಮಾಹಿತಿ ಕಲೆ ಹಾಕಲಾಗುತ್ತಿದೆ. -ತ್ರಿನೇಶ್ವರ, ಎಇಇ, ಲೋಕಪಯೋಗಿ ಇಲಾಖೆ ಕಾರ್ಕಳ ಭಾರಿ ಮಳೆ ಹಾಗೂ ನೀರಿನ ಸಂಗ್ರಹದಿಂದ ರಸ್ತೆಗಳಲ್ಲಿ ಭಾರಿ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸಂಚಾರ ಸಂದರ್ಭ ಏಳು ಬೀಳುಗಳು ಮಾಮೂಲಾಗಿವೆ. ಎದುರಿನಿಂದ ವಾಹನ ಬಂದಾಗ ಮುಂದೆ ಸಾಗಲು ಭಯವಾಗುತ್ತಿದ್ದು, ರಸ್ತೆ ದುರಸ್ತಿಗೆ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಬಗ್ಗದಿರುವುದು ವಿಷಾದ. -ಶ್ರೀಕಾಂತ್ ಪೂಜಾರಿ ಕುಚ್ಚೂರು, ಜೆಡಿಎಸ್ ಅಧ್ಯಕ್ಷ ಕಾರ್ಕಳ