ಜಿಲ್ಲೆಯಲ್ಲೇ ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ನರಸಾಪುರ ಹೋಬಳಿ ಕೇಂದ್ರದ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿ, ವಾಹನ ಸವಾರರನ್ನು ಅಪಾಯಕ್ಕೆ ಆಹ್ವಾನಿಸುತ್ತಿವೆ.
ರಾಜಧಾನಿ ಬೆಂಗಳೂರಿಗೆ 40 ಕಿ.ಮೀ. ದೂರದಲ್ಲಿದ್ದು, ನೂರಾರು ಕೈಗಾರಿಕೆಗಳು ತಲೆ ಎತ್ತಿವೆ. ಈ ಭಾಗದಲ್ಲಿ ಹೆಚ್ಚಾಗಿ ಉತ್ಪಾದನಾ ಕಂಪನಿಗಳೇ ಇದ್ದು, ಸರಕು ಸಾಗಣೆ ಮಾಡಲು ಸುಸಜ್ಜಿತ ರಸ್ತೆಯಿಲ್ಲದಂತಾಗಿದೆ. ಇಲ್ಲಿಂದ ಕೈಗಾರಿಕಾ ಪ್ರದೇಶ, ವೇಮಗಲ್, ಬೆಂಗಳೂರು, ಹೋಸಕೋಟೆ, ದೇವನಹಳ್ಳಿ ಹೀಗೆ ಹಲವು ಕಡೆ ಸಂಪರ್ಕ ಕಲ್ಪಿಸುತ್ತದೆ. ನರಸಾಪುರ ಮಾರ್ಗವಾಗಿ ಬೆಂಗಳೂರು&ಚೆನ್ನೆ$ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಹೇಳಿಕೊಳ್ಳುವಷ್ಟು ಅನುಕೂಲಕರವಾಗಿ ಏನೂ ಇಲ್ಲದಾಗಿದೆ. ಸುಮಾರು ಹಳ್ಳಿಗಳಿಗೆ ಸಂಪರ್ಕಕ ಕಲ್ಪಿಸುವ ಮಾರ್ಗವೂ ಗುಂಡಿಮಯವಾಗಿವೆ.
ಆರೋಗ್ಯ ಸಮಸ್ಯೆ ಎದುರಾಗಿ ಆಸ್ಪತ್ರೆಗೆ ಸಂಚರಿಸುವಷ್ಟರಲ್ಲಿ ಆರೋಗ್ಯ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುತ್ತದೆ. ಇಚೆಗೆ ನರಸಾಪುರ ಯೋಜನಾ ಪ್ರಾಧಿಕಾರವನ್ನಾಗಿ ಘೋಷಣೆ ಮಾಡಿದ್ದು, ಅದಕ್ಕೆ ತಕ್ಕಂತೆ ಅಭಿವೃದ್ಧಿ ಇಲ್ಲದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ನರಸಾಪುರವನ್ನು ಕೈಗಾರಿಕೆ ಪ್ರದೇಶವನ್ನಾಗಿ ಘೋಷಣೆ ಮಾಡುತ್ತಿದ್ದಂತೆ, ಸುಸಜ್ಜಿತ ರಸ್ತೆಗಳು, ಸರ್ಕಾರಿ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ಹೀಗೆ ಹಲವು ಅಭಿವೃದ್ಧಿ ಕಾಣಬಹುದು ಎಂದು ಸ್ಥಳಿಯರು ನಿರೀಸಿದ್ದರು. ಆದರೆ ನಿರೀತ ಮಟ್ಟದಲ್ಲಿ ಅಭಿವೃದ್ಧಿ ಹೊಂದದೆ ಇರುವುದು ನಿರಾಸೆಯುಂಟು ಮಾಡಿದೆ. ಇನ್ನಾದರೂ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ರಸ್ತೆಗಳನ್ನು ಅಭಿವೃದ್ಧಿಪಡಿಸತ್ತ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಜೋಡಿ ಕೃಷ್ಣಾಪುರದಿಂದ ಬೆಳ್ಳೂರಿಗೆ ಬರುವ ರಸ್ತೆಯು ಹಾಳಾಗಿದೆ. ವಾಹನಗಳು ಸಂಚರಿಸುವ ಯೋಗ್ಯವಾಗಿಲ್ಲ. ಮಳೆಗಾಲದಲ್ಲಿ ಕೇಸರು ಗದ್ದೆಗಳಂತಾಗುತ್ತವೆ. | ಹರೀಶ್ಗೌಡ ಯುವ ಮುಖಂಡ, ಖಾಜಿಕಲ್ಲಹಳ್ಳಿ
ನಿತ್ಯ ಧೂಳು ಸಮಸ್ಯೆ ನರಸಾಪುರದಲ್ಲಿ ಹಾದು ಹೋಗಿರುವ ಸುಮಾರು 3 ಕಿ.ಮೀ. ದೂರದ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಂಡಿದ್ದು, ಅಗಲಿಕರಣ ವೇಳೆ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ನರಸಾಪುರ ಮತ್ತು ಕುರ್ಕಿ ಗ್ರಾಮದ ಕೆಲವರು ಕೋರ್ಟ್ ಮೋರೆ ಹೋಗಿದ್ದರಿಂದ ಗುತ್ತಿಗೆದಾರ ರಸ್ತೆಗೆ ಜಲ್ಲಿ ಕಲ್ಲು ಹಾಕಿ ಸ್ಥಗಿತಗೊಳಿಸಿದ್ದರು. ಇತ್ತೀಚೆಗೆ ಮತ್ತೆ ಕಾಮಗಾರಿ ಆರಂಭವಾಗಿದ್ದು, ಆದಷ್ಟ ಬೇಗ ಕೆಲಸ ಮುಗಿಸಬೇಕಿದೆ. ಅವೈಜ್ಞಾನಿಕವಾಗಿ ಅಗಲಿಕರಣ ಮಾಡಿರುವುದು, ಕೆಲ ಪ್ರಭಾವಿಗಳ ಒತ್ತಡಕ್ಕೆ ಮಣಿದು ಬಡವರ ಆಸ್ತಿ ಧ್ವಂಸ ಮಾಡಲಾಗಿದೆ. ಉಳ್ಳವರ ಆಸ್ತಿ ರಕ್ಷಣೆ ಮಾಡಲು ರಸ್ತೆ ಅಗಲಿಕರಣದಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದು, ಸಮಸ್ಯೆ ಬಗೆಹರಿಯಬೇಕಿದೆ.
ರಸ್ತೆಗಳಲ್ಲಿ ದೊಡ್ಡ ದೊಡ್ಡ ಹಳ್ಳಗಳು ಬಿದ್ದಿರುವುದರಿಂದ ವಾಹನಗಳನ್ನು ಚಲಾಯಿಸುವುದು ಸವಾಲಿನ ಕೆಲಸ ಆಗಿದೆ. ಹಳ್ಳಗಳಲ್ಲಿ ದ್ವಿಚಕ್ರ ಸಹವಾರರು ಬಿದ್ದು ಗಾಯಗಳನ್ನು ಸಹ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. | ಏಜಾಜ್ ಉಲ್ಲಾಖಾನ್, ಕರ್ನಾಟಕ ಚಾಲಕರ ಒಕ್ಕೂಟ ಹೋಬಳಿ ಅಧ್ಯಕ್ಷ, ನರಸಾಪುರ
ರಸ್ತೆ ರಿಪೇರಿಗೆ ಒತ್ತಾಯ ಕೈಗಾರಿಕೆ ಪ್ರದೇಶದಲ್ಲಿನ ಕೈಗಾರಿಕೆಗಳಿಗೆ ಕೆಸಿ ವ್ಯಾಲಿ ನೀರು ಸರಬರಾಜು ಮಾಡಲು ಕೆಐಎಡಿಬಿಯಿಂದ ಪೈಪ್ಲೈನ್ ಕೆಲಸ ಕೈಗೆತ್ತಿಕೊಂಡು ಸುಮಾರು ತಿಂಗಳುಗಳೇ ಕಳೆದಿದ್ದು ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ಕೈಗಾರಿಕೆ ಪ್ರದೇಶದೊಳಗೆ ಹೋಗುವ ಮಾರ್ಗವೂ ಬಂದ್ ಆಗಿದೆ. ಕಂಪನಿಗಳ ಬಸ್ಗಳು, ಕ್ಯಾಬ್ಗಳು, ಸರಕು ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿದೆ. ಒಂದೇ ಕಡೆ ಸಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು, ಕಾಮಗಾರಿಗೆ ವೇಗ ನೀಡಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕಿದೆ.
ನರಸಾಪುರ&ವೇಮಗಲ್ ರಸ್ತೆಯಲ್ಲಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಮುಚ್ಚುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. | ಚಂದ್ರಶೇಖರ್, ಚೌಡದೇನಹಳ್ಳಿ
ಹೆದ್ದಾರಿ ಕಾಮಗಾರಿ ವಿಳಂಬ ರಾಷ್ಟ್ರೀಯ ಹೆದ್ದಾರಿ&75 ಸಂಬಂಧಿಸಿದಂತೆ ನರಸಾಪುರ, ಬೆಳ್ಳೂರು ಬೈಪಾಸ್ ಮಾರ್ಗವಾಗಿ ಕೋಲಾರದಿಂದ ಬೆಂಗಳೂರಿಗೆ ನಿತ್ಯ ವಾಹನ ಸಂಚಾರ ಹೆಚ್ಚಾಗಿದೆ. ಕೈಗಾರಿಕೆ ಪ್ರದೇಶದ ಪ್ರವೇಶ ದ್ವಾರದ ಸಮೀಪ ಮೇಲ್ಸೆತುವೆಗಳ ನಿರ್ಮಾಣ ಕೆಳದ 2&3 ವರ್ಷಗಳಿಂದ ನಡೆಯುತ್ತಿದ್ದು, ಇದುವರೆಗೂ ಪೂರ್ಣಗೊಂಡಿಲ್ಲ. ಕಂಪನಿಗಳಿಗೆ ಬಸ್ಗಳು ಹೋಗುವ ಹಾಗೂ ಬರುವ ವೇಳೆ ವಾಹನಗಳ ದಟ್ಟಣೆ ಹೆಚ್ಚಾಗುತ್ತದೆ. ಸಂಸದರು, ಶಾಸಕರು ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಬೆಂಗಳೂರಿಗೆ ಹೋಗಿ ಬರುವಾಗ ಗಮನಿಸುತ್ತಿದ್ದರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನು ಸರ್ವೀಸ್ ರಸ್ತೆಯಲ್ಲಿ ಗುಂಡಿಗಳಿದ್ದು, ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದಿರುವ ನಿದರ್ಶನಗಳಿವೆ.
-ಲೋಕೇಶ್ ನರಸಾಪುರ