ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪಾರಂಪರಿಕ ದಸರಾವನ್ನು ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಹಳ್ಳ-ಗುಂಡಿ ಬಿದ್ದಿದ್ದ ಗಂಜಾಂ ಸಂಪರ್ಕ ರಸ್ತೆ ಹಾಗೂ ಕಾವೇರಿ ಪ್ರಹಾದಿಂದ ಕೊಚ್ಚಿ ಹೋಗಿದ್ದ ವೆಲ್ಲೆಸ್ಲೀ ಹಳೇ ಸೇತುವೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಪುರಸಭಾ ಸದಸ್ಯರು ಹಾಗೂ ಗಂಜಾಂನ ಮುಖಂಡರೊಂದಿಗೆ 2 ಕೋಟಿ ರೂ.ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವಿವಿಧ ಯೋಜನೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.
ಪಟ್ಟಣದಿಂದ ಗಂಜಾಂಗೆ ಸಂಪರ್ಕ ಕಲ್ಪಿಸುವ 800 ಮೀಟರ್ ರಸ್ತೆಯ ಅರ್ಧ ಕಾಮಗಾರಿ ಜೋಡಿ ರಸ್ತೆವರೆಗೂ ಬಹಳ ಸಮಯಗಳಿಂದ ಬಾಕಿ ಉಳಿದಿತ್ತು. ಜತೆಗೆ ಇತ್ತೀಚೆಗೆ ಸಾಕಷ್ಟು ಮಳೆ ಸುರಿದ ಕಾರಣ ಕಾವೇರಿ ನದಿಯಲ್ಲಿ ಉಂಟಾದ ಪ್ರವಾಹದಿಂದ ಶತಮಾನದ ವೆಲ್ಲೆಸ್ಲೀ ಹಳೇ ಸೇತುವೆಯ 80ಮೀಟರ್ ಸಂಪರ್ಕ ರಸ್ತೆ ಡಾಂಬಾರು ಹಾಗೂ ಮಣ್ಣು ಸಮೇತ ಕೊಚ್ಚಿಹೋಗಿ ಹಾಳಾಗಿತ್ತು. ಹೀಗಾಗಿ 2 ಕೋಟಿ ರೂ.ವೆಚ್ಚದಲ್ಲಿ ಇವೆರಡು ರಸ್ತೆಗಳನ್ನು ಕಾಮಗಾರಿ ನಡೆಸಿ ಪುರಜನರು ಅಪಘಾತ ರಹಿತ ವಿಸ್ತಾರವಾಗಿ ಸಂಚರಿಸಲು ದಸರಾ ಒಳಗಾಗಿ ನಡೆಸಲು ಚಾಲನೆ ನೀಡಲಾಗಿದ್ದು, ಜತೆಗೆ ವಿದ್ಯುತ್ ಬೀದಿ ದೀಪಗಳನ್ನೂ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿ ತರಾತುರಿಯಲ್ಲಿ ನಡೆಸದೆ ಗುಣಮಟ್ಟದಲ್ಲಿ ನಿರ್ಮಿಸುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಪುರಸಭಾ ಸದಸ್ಯರಾದ ಎಂ.ಎಲ್.ದಿನೇಶ್, ನರಸಿಂಹೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎಂ.ನಂದೀಶ್, ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ, ಲೋಕೋಪಯೋಗಿ ಇಲಾಖೆ ಎಇಇ ಜಸ್ವಂತ್ ಪಂಡಿತ್, ಮುಖಂಡರಾದ ಗಂಜಾಂ ಚನ್ನಪ್ಪ, ನಾಗಣ್ಣ, ಬಾಲು, ನಿರಂಜನ್, ಗಂಜಾಂ ರವಿಚಂದ್ರು, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟೆಂಟ್ ಸುರೇಶ್, ನಗರ ಕಾರ್ಯಧ್ಯಕ್ಷ ಎಂ.ಲೋಕೇಶ್, ಸೋಮಸುಂದರ್, ಪೆಟ್ರೋಲ್ ಬಂಕ್ ಪ್ರಸನ್ನ ಗುತ್ತಿಗೆದಾರ ಗೋವಿಂದೇಗೌಡ, ಮಲ್ಲು ಅರಸ್ ಮತ್ತಿತರರು ಹಾಜರಿದ್ದರು.