ಮುರಗೋಡ ಬೈಲಹೊಂಗಲ ಮುಖ್ಯ ರಸ್ತೆ ಕೆಸರುಮಯವಾಗಿರುವುದು. 
ಜಿಲ್ಲೆ

ರಸ್ತೆ ಕಾಮಗಾರಿ ಮುಗಿಯೋದ್ಯಾವಾಗ?

ಮುರಗೋಡ: ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ರಸ್ತೆಗಳನ್ನು ನಿರ್ಮಿಸುತ್ತದೆ. ಕೆಲ ಕಾಮಗಾರಿಗಳು ಬೇಗ ಮುಗಿದರೆ ಇನ್ನು ಕೆಲವು ವರ್ಷಾನುಗಟ್ಟಲೆ ತೆವಳುತ್ತಲೇ ಇರುತ್ತವೆ. ಅದಕ್ಕೆ ಉದಾಹರಣೆ ಎಂಬಂತೆ ಬೈಲಹೊಂಗಲ- ಮುರಗೋಡ ರಸ್ತೆ ವರ್ಷ ಕಳೆದರೂ ಮುಗಿಯುತ್ತಿಲ್ಲ. ಇದರಿಂದ ಸಂಚಾರ ದುಸ್ತರವಾಗಿದ್ದು, ಸಾರ್ವಜನಿಕರು ರೋಸಿಹೋಗಿದ್ದಾರೆ.

ವರ್ಷ ಕಳೆದರೂ ಮುಗಿಯದ ಕಾಮಗಾರಿ: ಒಂದು ವರ್ಷದಿಂದ ಮುರಗೋಡ- ಬೈಲಹೊಂಗಲ ಮುಖ್ಯ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದೆ. ದಿನನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದ್ದು, ಅಲ್ಲಿಲ್ಲಿ ರಸ್ತೆ ಅಗೆದು ಸೇತುವೆ ಕಾರ್ಯ ಪ್ರಾರಂಭವಾಗಿದೆ. ಸೇತುವೆ ಪಕ್ಕದಲ್ಲಿ ನಿರ್ಮಿಸಿದ ತಾತ್ಕಾಲಿಕ ರಸ್ತೆ ಕಳಪೆಯಾಗಿದ್ದು, ಸಂಚಾರಕ್ಕೆ ಹರಸಾಹಸಪಡುವಂತಾಗಿದೆ. ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ 11 ಕಿ.ಮೀ.ರಸ್ತೆ ಕಾಮಗಾರಿಯನ್ನು ಇಬ್ಬರು ಗುತ್ತಿಗೆದಾರರು ಪ್ರಾರಂಭಿಸಿದ್ದಾರೆ. ವರ್ಷ ಕಳೆದರೂ ಕೇವಲ 5 ಕಿ.ಮೀ. ರಸ್ತೆ ಮಾತ್ರ ನಿರ್ಮಿಸಲಾಗಿದೆ.

ಲಾಕ್‌ಡೌನ್ ನೆಪದಲ್ಲಿ ಸ್ಥಗಿತ: ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್ ನೆಪದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈಚೆಗೆ ಕಾಮಗಾರಿ ಮರು ಆರಂಭಿಸಿದ್ದು, ರಸ್ತೆ ಮಧ್ಯೆ ಚಿಕ್ಕಪುಟ್ಟ ಸೇತುವೆ ನಿರ್ಮಾಣದ ಕೆಲಸಕ್ಕೆ ಕೈ ಹಾಕಿ ರಸ್ತೆ ಅಗೆದು ಬಿಡಲಾಗಿದೆ. ಸೇತುವೆ ಪಕ್ಕಕ್ಕೆ ತಾತ್ಕಾಲಿಕವಾಗಿ ಮುಖ್ಯ ರಸ್ತೆಯ ಮರಕುಂಬಿ- ಮುರಗೋಡ ಮಧ್ಯೆ, ಹಾರೂಗೊಪ್ಪ ಕ್ರಾಸ್ ಹತ್ತಿರ ಮತ್ತು ಹಿರೇಮಠ ಅವರ ಹೊಲದ ಹತ್ತಿರ ಅಜ್ಜನ ಪೂಲ್ ಹಾಗೂ ಅಲ್ಲಲ್ಲಿ ಸೇತುವೆ ನಿರ್ಮಾಣ ನಿಮಿತ್ತ ರಸ್ತೆ ನಿರ್ಮಿಸಲಾಗಿದೆ.
ಎರೆ ಮಣ್ಣು, ಮರಳು ಹಾಕಿ ಅಡ್ಡ ರಸ್ತೆ ನಿರ್ಮಿಸಿದ್ದು, ಮಳೆ ನೀರು ನಿಂತು ರಸ್ತೆ ತುಂಬ ಕೆಸರು ತುಂಬಿದೆ. ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದೇ ಮಾರ್ಗವಾಗಿ ಯರಗಟ್ಟಿ, ಗೋಕಾಕ, ಸವದತ್ತಿಗೆ ಸಾಗಬೇಕಿದ್ದು, ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಎಲ್ಲರಿಗೂ ಸಮಸ್ಯೆ ಆಗುತ್ತಿದೆ. ಪ್ರಯಾಣಿಕರು ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರ ಕ್ರಮ ಕೈಗೊಂಡು ಕಾಮಗಾರಿ ಮುಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಮುರಗೋಡ ಬೈಲಹೊಂಗಲ ಮಾರ್ಗದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಅಡ್ಡ ರಸ್ತೆ ಕಳಪೆಯಾಗಿದ್ದು, ವಾಹನಗಳು ಮಣ್ಣಲ್ಲಿ ಸಿಲುಕಿಕೊಂಡು ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು.| ಮಲ್ಲಿಕಾರ್ಜುನ ಗಣಾಚಾರಿ ಎಇಇ ಬೈಲಹೊಂಗಲಮುರಗೋಡ ಬೈಲಹೊಂಗಲ ಮುಖ್ಯ ರಸ್ತೆಯ ಗುತ್ತಿಗೆ ಪಡೆದ ಎನ್.ಬಿ. ಹಿರೇಮಠ ಅವರಿಗೆ ತ್ವರಿತವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ. ಸೇತುವೆ ಪಕ್ಕದ ರಸ್ತೆ ಕಳಪೆಯಾಗಿರುವುದು ಗಮನಕ್ಕೆ ಬಂದಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಉತ್ತಮ ರಸ್ತೆ ನಿರ್ಮಿಸಲು ಸೂಚಿಸಲಾಗಿದೆ.| ಮಹಾಂತೇಶ ಕೌಜಲಗಿ ಶಾಸಕರು ಬೈಲಹೊಂಗಲ

| ಮಹಾಂತೇಶ ಬಾಳಿಕಾಯಿ ಮುರಗೋಡ