ಯಳಂದೂರು: ಯಳಂದೂರು ಪಟ್ಟಣದ ಬಳೇಪೇಟೆಯಿಂದ ವೈ.ಕೆ.ಮೋಳೆ ಮಾರ್ಗವಾಗಿ ಚಂಗಚಹಳ್ಳಿ ಕ್ರಾಸ್‌ವರೆಗಿನ ರಸ್ತೆ ಕಾಮಗಾರಿ ಆರಂಭವಾಗಿ 7 ತಿಂಗಳು ಕಳೆಯುತ್ತ ಬಂದಿದ್ದರೂ ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕರು, ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಫೇಸ್-5ರಡಿ ಪಟ್ಟಣದ ಬಳೇಪೇಟೆಯಿಂದ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ 20 ಕೋಟಿ ರೂ. ಬಿಡುಗಡೆಯಾಗಿತ್ತು. ಇದನ್ನು ಮಾರ್ಪಡಿಸಿ ಬಳೇಪೇಟೆಯಿಂದ ವೈ.ಕೆ.ಮೋಳೆ ಗ್ರಾಮದ ಮಾರ್ಗವಾಗಿ ಚಂಗಚಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 2 ಕಿ.ಮೀ. ರಸ್ತೆಗೆ 7 ಕೋಟಿ ರೂ., ಇದರಲ್ಲಿ 700 ಮೀಟರ್ ಗ್ರಾಮದೊಳಗೆ ರಸ್ತೆ ಬದಿ ಚರಂಡಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. 2024ರ ಸೆ.27ರಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರು.
ಚರಂಡಿಯೂ ಅಪೂರ್ಣ: ಗ್ರಾಮದಲ್ಲಿ 700 ಮೀಟರ್ ಚರಂಡಿ ನಿರ್ಮಿಸಿ ನಂತರ ರಸ್ತೆಯ ಅಭಿವೃದ್ಧಿ ಮಾಡಬೇಕು ಎಂದು ಯೋಜನೆ ರೂಪಿಸಲಾಗಿತ್ತು. ಆದರೆ ಚರಂಡಿ ಕಾಮಗಾರಿಯೂ ಅಪೂರ್ಣವಾಗಿದೆ. ಗ್ರಾಮದ ಹೊರ ಭಾಗದಲ್ಲಿರುವ ರಮೇಶ್ ಅವರ ಮನೆ ಮುಂಭಾಗ ಚರಂಡಿ ಕಾಮಗಾರಿ ನಿಲ್ಲಿಸಲಾಗಿದೆ. ಹಾಗಾಗಿ ಅವರ ಮನೆ ಆವರಣದಲ್ಲೇ ಚರಂಡಿಯ ಕಲುಷಿತ ನೀರು, ತ್ಯಾಜ್ಯ ಶೇಖರಣೆಗೊಳ್ಳುತ್ತಿದೆ. ಇದನ್ನು ಇನ್ನೂ ವಿಸ್ತರಿಸಬೇಕು ಎಂಬ ಮನವಿಗೆ ಇಲಾಖೆಯಿಂದಾಗಲಿ, ಅಧಿಕಾರಿಗಳಿಂದಾಗಲಿ ಯಾವುದೇ ಭರವಸೆ ಸಿಕ್ಕಿಲ್ಲ ಎಂಬುದು ರಮೇಶ್ ಅವರ ಆರೋಪ. ಇದ್ದ ರಸ್ತೆ ಅಗೆದು ಹಾಗೆ ಬಿಡಲಾಗಿದೆ. ಹಾಗಾಗಿ ವಾಹನ ಸಂಚಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲದಲ್ಲಿ ಆತಂಕ: ಮಳೆಗಾಲ ಸನ್ನಿಹಿತವಾಗಿದೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ರಸ್ತೆ ಅಗೆದು ಇದಕ್ಕೆ ಮಣ್ಣು, ಕಲ್ಲು ಸುರಿಯಲಾಗಿದೆ. ನೀರನ್ನು ಸಿಂಪಡಣೆ ಮಾಡಿದರೂ ಬಿಸಿಲಿಗೆ ಬೇಗ ಒಣಗುತ್ತದೆ. ಈ ಭಾಗದಲ್ಲಿ ವಾಹನ ಸಂಖ್ಯೆಗಳ ಓಡಾಟ ಹೆಚ್ಚಿದೆ. ರಸ್ತೆಯ ಬದಿಯಲ್ಲೇ ವಾಸದ ಮನೆಗಳು, ಅಂಗಡಿಗಳಿವೆ. ವಾಹನ ಸಂಚರಿಸಿದರೆ ಧೂಳು ಆವರಿಸುತ್ತದೆ. ಮಳೆ ಬಂದರೆ ರಸ್ತೆ ಕೊಚ್ಚೆಯಾಗುತ್ತದೆ. ಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದರಿಂದ ಚರಂಡಿ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಭೀತಿ ಇದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸುವ ನಿಯಮವಿದ್ದರೂ ಸಂಬಂಧಪಟ್ಟ ಗುತ್ತಿಗೆದಾರ ಮೀನಮೇಷ ಎಣಿಸುತ್ತಿರುವುದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ಗುತ್ತಿಗೆದಾರರಿಗೆ ಆರೋಗ್ಯ ಸರಿಯಿಲ್ಲದ ಕಾರಣ ರಸ್ತೆ ಕಾಮಗಾರಿ ನಿಧಾನವಾಗಿದೆ. ಇನ್ನೆರಡು ತಿಂಗಳೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ವೈ.ಕೆ.ಮೋಳೆ ಗ್ರಾಮದಲ್ಲಿ ನಿಗದಿತ ಚರಂಡಿ ಕಾಮಗಾರಿ ಮುಗಿದಿದೆ. ಗ್ರಾಮದ ಹೊರ ಭಾಗದಲ್ಲಿ ಒಂದು ಮನೆ ಇದೆ. ಇಲ್ಲಿಗೂ ಚರಂಡಿ ನಿರ್ಮಿಸುವಂತೆ ಮನೆಯ ಮಾಲೀಕರು ಮನವಿ ಮಾಡಿದ್ದಾರೆ. ಯಳಂದೂರು ಪಟ್ಟಣದಲ್ಲೂ ಚರಂಡಿ ನಿರ್ಮಿಸಬೇಕಿದೆ. ಇಲ್ಲಿ ಚರಂಡಿ ನಿರ್ಮಾಣ ಮಾಡುವಾಗ ನಿಗದಿಗಿಂತ ಕಡಿಮೆ ಚರಂಡಿ ಬಂದಲ್ಲಿ, ವೈ.ಕೆ.ಮೋಳೆ ಗ್ರಾಮದಲ್ಲಿ ಚರಂಡಿ ನಿರ್ಮಿಸಲು ಕ್ರಮ ವಹಿಸಲಾಗುವುದು. ಪುರುಷೋತ್ತಮ್ ಎಇಇ, ಲೋಕೋಪಯೋಗಿ ಇಲಾಖೆ ವೈ.ಕೆ.ಮೋಳೆ ಗ್ರಾಮದಲ್ಲಿ ಚರಂಡಿ, ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೆ ಚರಂಡಿಯನ್ನು ತಂದು ಗ್ರಾಮದ ಹೊರಭಾಗದಲ್ಲಿ ಮನೆ ಇದೆ ಎಂಬ ಕಾರಣಕ್ಕೆ ನಮ್ಮ ಮನೆಯ ಬಳಿ ಚರಂಡಿ ಕಾಮಗಾರಿ ನಿಲ್ಲಿಸಲಾಗಿದೆ. ಆದರೆ ಮಳೆ ಬಂದರೆ ಮನೆಗೆ ನೀರು ನುಗ್ಗುತ್ತದೆ. ಗ್ರಾಮದ ಎಲ್ಲ ಕಲುಷಿತ ನೀರು ಇಲ್ಲೇ ಶೇಖರಣೆಯಾಗುತ್ತಿದೆ. ಇದು ಸರಾಗವಾಗಿ ಚಲಿಸುವಂತೆ ಮಾಡಬೇಕು. ಇಲ್ಲೂ ಚರಂಡಿ ನಿರ್ಮಿಸಬೇಕು. ರಸ್ತೆ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕು. ರಮೇಶ್ ಗ್ರಾಮಸ್ಥ, ವೈ.ಕೆ.ಮೋಳೆ