ಗದಗ: ಗದಗ ವಿಧಾನಸಭಾ ಕ್ಷೇತ್ರದ ವಿವಿಧ ಕಡೆಗಳಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ವಿಶೇಷ ಆಸಕ್ತಿ ವಹಿಸಿ ಪೂರ್ಣಗೊಳಿಸಬೇಕೆಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಗದಗ ವಿಧಾನಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗದಗ ವಿಧಾನಸಭಾ ಕ್ಷೇತ್ರದ ರಸ್ತೆಗಳು ಅಲ್ಲಲ್ಲಿ ಕೆಟ್ಟು ಹೋಗಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ರಸ್ತೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ನಿಗದಿತ ಸಮಯದಲ್ಲಿಯೇ ಕಾಮಗಾರಿಗಳು ಪೂರ್ಣಗೊಳ್ಳಬೇಕು. ವಿನಾಕಾರಣ ಸಂಬಂಧಿತ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ಧೋರಣೆ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಬೀದಿ ದೀಪಗಳನ್ನು ಸೂಕ್ತ ಸ್ಥಳಗಳಲ್ಲಿ ಅಳವಡಿಕೆ ಮಾಡದಿರುವ ಕಾರಣದಿಂದ ರಸ್ತೆ ದುರಸ್ತಿ ಕಾಮಗಾರಿಗೆ ತೊಂದರೆಯಾಗುತ್ತಿದೆ. ಹುಲಕೋಟಿ ಗ್ರಾಮದಲ್ಲಿ ಚರಂಡಿ ಮತ್ತು ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಈ ಕುರಿತು ಸಂಬಂಧಿತ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಕ್ರಮವಹಿಸಬೇಕು ಎಂದರು.
ನಗರದ ಬೆಟಗೇರಿಯಿಂದ ಗದಗನ ಕರಿಯಪ್ಪ ಸರ್ಕಲ್‍ದವರೆಗೆ ಕಮಾನು ರೀತಿಯ ಬೀದಿ ದೀಪಗಳನ್ನು ಅಳವಡಿಸಲು ಕ್ರಮವಹಿಸಬೇಕು. ರಸ್ತೆ ದುರಸ್ತಿ ಕಾಮಗಾರಿಗಳ ಜೊತೆಗೆ ರಸ್ತೆಯ ಅಕ್ಕಪಕ್ಕದಲ್ಲಿ ಸಸಿಗಳನ್ನು ನಡೆಸುವ ಮೂಲಕ ನಗರದ ಸ್ವಚ್ಛತೆ ಹಾಗೂ ಸೌಂದರ್ಯೀಕರಣಕ್ಕೆ ಒತ್ತು ಕೊಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಭೂಮರೆಡ್ಡಿ ಸರ್ಕಲ್ ದಿಂದ ಜರ್ಮನ್ ಹಾಸ್ಪಿಟಲ್‍ವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಸಚಿವರು ತಿಳಿಸಿದಾಗ ಅಲ್ಲಿನ ನೀರು ಸರಬರಾಜು ಪೈಪ್‍ಲೈನ್ ಕಾಮಗಾರಿ ಪ್ರಾರಂಭವಾಗಿರುವುದರಿಂದ ರಸ್ತೆ ದುರಸ್ತಿ ಕಾಮಗಾರಿಗೆ ಸ್ವಲ್ಪ ವಿಳಂಬವಾಗಿದೆ. ಆದಷ್ಟು ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಗದಗ ನಗರದ ಧೋಬಿ ಘಾಟ್‍ನಿಂದ ರಾಧಾಕೃಷ್ಣನಗರ -ಜಿಮ್ಸ್ ಮೆಡಿಕಲ್ ಕಾಲೇಜು ಬ್ರಿಡ್ಜ್ ಪೂರ್ಣಗೊಳೀಸಲು ಕ್ರಮ ವಹಿಸಬೇಕು. ಬೆಳದಡಿ ಕ್ರಾಸ್ –ಯಲಿಶಿರೂರ ಕ್ರಾಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕೆಶಿಪ್ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಸಭೆಯಲ್ಲಿ ಶಲವಡಿ-ಮುಂಡರಗಿ, ಗದಗ- ಪಾಪನಾಶಿ, ಮುಳಗುಂದ ನಾಕಾದಿಂದ ಚೆನ್ನಮ್ಮ ಸರ್ಕಲ್ ಮತ್ತು ಭೂಮರೆಡ್ಡಿ ಸರ್ಕಲ್, ಜರ್ಮನ್ ಹಾಸ್ಪಿಟಲ್‍ದಿಂದ ಬೆಟಗೇರಿಯ ಇಂಡಸ್ಟ್ರಿಯಲ್ ಎಸ್ಟೇಟ್ ರಸ್ತೆ ಕಾಮಗಾರಿ, ಬೆಟಗೇರಿಯ ತರಕಾರಿ ಮಾರುಕಟ್ಟೆಯಿಂದ ಶರಣಬಸವೇಶ್ವರ ಸ್ಕೂಲ್ ವರೆಗೆ, ಬೆಟಗೇರಿಯ ಬಸ್ ಸ್ಟ್ಯಾಂಡ್ ನಿಂದ ಭಜಂತ್ರಿ ರೋಡ, ಬೆಟಗೇರಿಯ ಹಾಕಿ ಸ್ಟೇಡಿಯಂ ಮುಂದುಗಡೆಯಿಂದ 1ನೇ ವಾರ್ಡ ಮೇನ ರೋಡ, ಗಂಗಿಮಡಿ ಮೇನ್ ರೋಡ್ ನಿಂದ 16ನೇ ವಾರ್ಡ, ವೀರನಾರಾಯಣ ದೇವಸ್ಥಾನದಿಂದ ಗುಜ್ಜರಬಸ್ತಿ ರಾಚೋಟೇಶ್ವರ ನಗರ, ಬನ್ನಿಮಂಟಪದಿಂದ ಕಳಸಾಪುರ ರಸ್ತೆ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿಯೇ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್,ಲೋಕೊಪಯೋಗಿ ಇಲಾಖೆಯ ಕಾರ್ಯಪಾಲ ಅಭಿಯಂತರ ರಮೇಶ ಪಾಟೀಲ, ಪಿ.ಆರ್.ಇ.ಡಿ. ವಿಭಾಗದ ಕಾರ್ಯಪಾಲಕ ಅಭಿಯಂತರ ಎಸ್.ಆರ್.ಗೌಡರ, ನಗರಸಭೆ ಪೌರಾಯುಕ್ತ ಗಂಗಪ್ಪ ಎಂ, ಕೇಶಿಪ್ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಶೈಲ ಹೊನಕೇರಿ, ಕೆಆರ್‍ಡಿಸಿಎಲ್ ಕಾರ್ಯಪಾಲಕ ಅಭಿಯಂತರ ಮುರಳೀಧರ ಸೇರಿದಂತೆ ವಿವಿಧ ಅನುಷ್ಟಾನ ಇಲಾಖೆ ಹಾಗೂ ಏಜನ್ಸಿಗಳ ಮುಖ್ಯಸ್ಥರು ಹಾಜರಿದ್ದರು.